ತುಂಬಿ ತುಳುಕಿದ ಮ.ಬೆಟ್ಟಕ್ಕೆ ತೆರಳುವ ಬಸ್‌ಗಳು

12kgl-5
Published on

ಕೊಳ್ಳೇಗಾಲ: ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಮಲೆ ಮಹದೇಶ್ವರಬೆಟ್ಟದಲ್ಲಿ ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ನಡೆಯುವ 5 ದಿನದ ಜಾತ್ರಾ ಮಹೋತ್ಸವಕ್ಕೆ ತೆರಳಲು ಭಾನುವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ಮಾದಪ್ಪನ ಭಕ್ತರು ಮುಗಿಬಿದ್ದರು.


5 ದಿನಗಳ ಜಾತ್ರೆಯ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಶ್ರೀಮಲೆ ಮಹದೇಶ್ವರಬೆಟ್ಟಕ್ಕೆ ಜನರು ಆಗಮಿಸುತ್ತಿದ್ದಾರೆ. ಮೈಸೂರು, ಚಾಮರಾಜನಗರ ಭಾಗದ ನಾನಾ ಗ್ರಾಮಗಳಿಂದ ಕಾಲ್ನಡಿಗೆಯಲ್ಲೇ 1ವಾರದ ಹಿಂದಿನಿಂದಲೇ ಪ್ರಯಾಣ ಬೆಳೆಸಿದ್ದಾರೆ. ಅಂತೆಯೇ, ಸಾರಿಗೆ ಹಾಗೂ ಖಾಸಗಿ ಬಸ್‌ಗಳಲ್ಲೂ ಭಾನುವಾರ ಸಹಸ್ರಾರು ಭಕ್ತರು ತೆರಳುತ್ತಿದ್ದು, ಬಸ್ ನಿಲ್ದಾಣ ಜನರಿಂದ ಕಿಕ್ಕಿರಿದಿದ್ದು. ಬಸ್ ಹತ್ತಲು ನಾ ಮುಂದು ತಾ ಮುಂದು ಎಂದು ಮುಗಿ ಬೀಳುವ ಪ್ರಸಂಗ ನಡೆಯಿತು.


ಖಾಸಗಿ ಬಸ್‌ಗಳಿಗೂ ಖುಲಾಯಿಸಿದ ಅದೃಷ್ಟ: ರಾಜ್ಯ ಸರ್ಕಾರದ ಗ್ಯಾರಂಟಿಯಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಮಹಿಳೆಯರು ಸಾರಿಗೆ ಬಸ್ ಪ್ರಯಾಣಕ್ಕೆ ಮುಗಿ ಬೀಳುವುದು ಸಾಮಾನ್ಯವಾಗಿದೆ. ಅಂತೆಯೇ, ಖಾಸಗಿ ಬಸ್ ಹತ್ತಲೂ ಮಹಿಳೆಯರು ಯೋಚನೆ ಮಾಡುತ್ತಿದ್ದರು. ಆದರೆ, ದೀಪಾವಳಿ ಅಮಾವಾಸ್ಯೆ ಹಿನ್ನೆಲೆ ಬೆಟ್ಟಕ್ಕೆ ಹೋಗುವ ಭಕ್ತರ ಸಂಖ್ಯೆ ಅಧಿಕವಾಗಿರುವುದರಿಂದ ಖಾಸಗಿ ಬಸ್ ಗಳಿಗೂ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಮುಗಿಬಿದ್ದಿರುವುದು ಕಂಡುಬಂದಿತು.


420 ಸಾರಿಗೆ ಬಸ್ ಸೇವೆ: ದೀಪಾವಳಿ ಅಮಾವಾಸ್ಯೆ ಹಿನ್ನೆಲೆ ಮಹದೇಶ್ವರಬೆಟ್ಟಕ್ಕೆ ಚಾಮರಾಜನಗರ ಸೇರಿದಂತೆ ವಿವಿಧೆಡೆಯಿಂದ ಸಾರಿಗೆ ಬಸ್ ನಿಯೋಜನೆ ಮಾಡಲಾಗಿದೆ. ಚಾಮರಾಜನಗರ ವಿಭಾಗದಿಂದ 120, ಮೈಸೂರು 150, ರಾಮನಗರ 30, ಮಂಡ್ಯ 60 , ತುಮಕೂರು 60 ಒಟ್ಟು 420 ಬಸ್‌ಗಳು ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದೆ ಎಂದು ಕೊಳ್ಳೇಗಾಲದ ಕೆಎಸ್‌ಆರ್ ಟಿಸಿ ಡಿಪೋ ಮ್ಯಾನೇಜರ್ ಮುತ್ತುರಾಜ್ ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net