ಪ್ರಯಾಣಿಕರ ತಂಗುದಾಣ ತೆರವು?: ಬಂಟ್ವಾಳ ಪುರಸಭೆಗೆ ಸಂಚಾರಿ ಪೊಲೀಸರ ಬೇಡಿಕೆ : ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಕಾರಣ

New Project (7)
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ

ಬಿ.ಸಿ.ರೋಡಿನಲ್ಲಿ ರಾಷ್ಟ್ರೀಯ ಹೆದ್ದಾರಿ ಸನಿಹ, ಖಾಸಗಿ ಬಸ್ ತಂಗುದಾಣ ಬಳಿಯಲ್ಲಿ ಬಂಟ್ವಾಳ ಪುರಸಭೆ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣವನ್ನು ಅಲ್ಲಿಂದ ತೆರವುಗೊಳಿಸಬೇಕು ಎನ್ನುವ ಬೇಡಿಕೆಯನ್ನು ಬಂಟ್ವಾಳ ಸಂಚಾರಿ ಪೊಲೀಸರು ಪುರಸಭೆಯ ಮುಂದಿಟ್ಟಿದ್ದಾರೆ. ರಾ.ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಈ ಶೆಲ್ಟರ್‌ನಿಂದ ಅಡಚಣೆಯಾಗುತ್ತಿದ್ದು, ಹೆದ್ದಾರಿಯಲ್ಲಿ ಬಸ್‌ಗಳ ಅಡ್ಡಾದಿಡ್ಡಿ ನಿಲುಗಡೆಯಿಂದ ಇತರ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಏನು ಸಮಸ್ಯೆ?: ತಾಲೂಕು ಕೇಂದ್ರವಾಗಿರುವ ಬಂಟ್ವಾಳದಲ್ಲಿ ಜನದಟ್ಟಣೆಯೊಂದಿಗೆ ಪ್ರತಿನಿತ್ಯ ವಾಹನ ದಟ್ಟಣೆಯೂ ಇರುತ್ತದೆ. ಇದರಿಂದ ಬಿ.ಸಿ.ರೋಡು ಬಿಜಿ ರೋಡಾಗಿ ಮಾರ್ಪಟ್ಟಿದೆ. ಬಸ್‌ಗೆ ಕಾಯುವ ಪ್ರಯಾಣಿಕರ ಅನುಕೂಲಕ್ಕಾಗಿ ಬಿ.ಸಿ.ರೋಡಿನ ಖಾಸಗಿ ಬಸ್ ನಿಲ್ದಾಣ ಬಳಿಯಲ್ಲಿಯೇ ಒಂದು ಪುರಸಭೆಯಿಂದ, ಮತ್ತೊಂದು ಲಯನ್ಸ್ ಸಂಸ್ಥೆಯ ವತಿಯಿಂದ ಪ್ರಯಾಣಿಕರ ಶೆಲ್ಟರ್ ನಿರ್ಮಿಸಲಾಗಿದೆ. ದೂರದೂರುಗಳಿಗೆ ಹೋಗುವ ಪ್ರಯಾಣಿಕರು ಲಯನ್ಸ್ ಸಂಸ್ಥೆ ನಿರ್ಮಿಸಿರುವ ಬಸ್ ಶೆಲ್ಟರ್ ಉಪಯೋಗಿಸಿದರೆ, ಗ್ರಾಮೀಣ ಭಾಗಕ್ಕೆ ಹೋಗುವ ಪ್ರಯಾಣಿಕರು ಶ್ರೀನಿವಾಸ್ ಆರ್ಕೆಡ್ ಮುಂಭಾಗ ಇರುವ ಶೆಲ್ಟರನ್ನು ಬಳಸುತ್ತಾರೆ.

ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ತುಂಬಿಸಿಕೊಂಡು ಗ್ರಾಮೀಣ ಭಾಗಗಳಿಗೆ ತೆರಳುವ ಖಾಸಗಿ ಬಸ್‌ಗಳು ಮತ್ತೆ ಈ ಶೆಲ್ಟರ್ ಮುಂಭಾಗದಲ್ಲಿ ಒಂದಷ್ಟು ಹೊತ್ತು ನಿಂತು ಪ್ರಯಾಣಿಕರನ್ನು ಹತ್ತಿಸುತ್ತಿರುತ್ತವೆ. ಈ ಸಂದರ್ಭ ಸಹಜವಾಗಿಯೇ ಹೆದ್ದಾರಿಯಲ್ಲಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ಟ್ರಾಫಿಕ್ ಜಾಂ ಉಂಟಾಗುತ್ತಿದೆ. ಈ ಸಮಸ್ಯೆ ಪರಿಹರಿಸಲು ಒಬ್ಬ ಟ್ರಾಫಿಕ್ ಪೊಲೀಸ್ ಇದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರಬೇಕಾಗುತ್ತದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ತುಂಬಿಸಿ ಮತ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನರನ್ನು ಹತ್ತಿಸಿಕೊಳ್ಳುವುದರಿಂದಲೇ ಸಮಸ್ಯೆ ಉಂಟಾಗಿದ್ದು ಈ ಸಮಸ್ಯೆಗೆ ಮೂಲ ಈ ಪ್ರಯಾಣಿಕರ ತಂಗುದಾಣವಾಗಿದ್ದು, ಅದು ತೆರವಾದರೆ ಸಮಸ್ಯೆ ಪರಿಹಾರವಾಗಬಹುದು ಎನ್ನುವ ಉದ್ದೇಶದಿಂದ ಟ್ರಾಫಿಕ್ ಪೊಲೀಸರು ಪುರಸಭೆಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ಗೊಂದಲಮಯ ಜಂಕ್ಷನ್

ಬಿ.ಸಿ.ರೋಡಿನ ಖಾಸಗಿ ಬಸ್ ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಜಂಕ್ಷನ್ ಗೊಂದಲಮಯ ಹಾಗೂ ಅಪಾಯಕಾರಿಯಾದುದು. ಇದೇ ಸ್ಥಳದಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿ ಹೊರಟ ಬಸ್‌ಗಳು ರಾಷ್ಟ್ರೀಯ ಹೆದ್ದಾರಿಯನ್ನು ಪ್ರವೇಶಿಸುತ್ತದೆ. ಅದೇ ಜಾಗದಲ್ಲಿ ಸರ್ವೀಸ್ ರಸ್ತೆಯಿಂದ ಬಂದ ಖಾಸಗಿ ಬಸ್‌ಗಳು ನಿಲ್ದಾಣಕ್ಕೆ ನುಗ್ಗುತ್ತವೆ. ಮೇಲ್ಸೆತುವೆ ಅಡಿ ಭಾಗದಲ್ಲೂ ಖಾಸಗಿ ಬಸ್‌ಗಳು ಪ್ರಯಾಣಿಕರನ್ನು ಇಳಿಸುತ್ತಾರೆ. ರಸ್ತೆ ದಾಟಲು ಸಾರ್ವಜನಿಕರು ಇದೇ ಸ್ಥಳವನ್ನು ಬಳಸಿಕೊಳ್ಳುತ್ತಾರೆ. ಅದೇ ಸ್ಥಳದಲ್ಲಿ ಆಟೋ ರಿಕ್ಷಾಗಳು ಬಸ್ ನಿಲ್ದಾಣದಲ್ಲಿರುವ ತಮ್ಮ ಸ್ಟಾೃಂಡ್‌ಗೇ ಧಾವಿಸುತ್ತವೆ. ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣ ರಸ್ತೆಯಲ್ಲಿಯೂ ಕೆಲವು ವಾಹನಗಳು ವೇಗದಲ್ಲಿ ನುಗ್ಗಿಸಿಕೊಂಡು ಹೋಗುತ್ತವೆ. ಒಟ್ಟಿನಲ್ಲಿ ಈ ಜಂಕ್ಷನ್ ತೀರಾ ಅಪಾಯಕಾರಿಯಾಗಿದೆ. ಟ್ರಾಫಿಕ್ ಪೊಲೀಸರಿದ್ದರೆ ವಾಹನ ಸಂಚಾರ ಸುಗಮವಾಗಿರುತ್ತದೆ. ಇಲ್ಲದಿದ್ದರೆ ಆಗಾಗ ಸಣ್ಣ ಪುಟ್ಟ ಅಪಘಾತಗಳು ನಡೆಯುತ್ತಿರುತ್ತವೆ.

ಸರ್ವೀಸ್ ರಸ್ತೆಯಲ್ಲೂ ಇದೇ ಗೋಳು

ಬಿ.ಸಿ.ರೋಡಿನಿಂದ ಪೊಳಲಿ, ಕಟೀಲು, ನೀರುಮಾರ್ಗಕ್ಕೆ ಸಂಚರಿಸುವ ಖಾಸಗಿ ಬಸ್‌ಗಳು ಬಸ್ ನಿಲ್ದಾಣ ಬಿಟ್ಟರೆ ಸರ್ವೀಸ್ ರಸ್ತೆಯಲ್ಲಿ ಒಂದಷ್ಟು ಹೊತ್ತು ನಿಲುಗಡೆಯಾಗುತ್ತವೆ. ಇದರಿಂದ ಸರ್ವೀಸ್ ರಸ್ತೆಯಲ್ಲಿ ಇತರ ವಾಹನಗಳಿಗೆ ಸಮಸ್ಯೆಯಾಗುತ್ತದೆ. ಬಸ್ ನಿಲ್ದಾಣದಲ್ಲಿ ಜನರನ್ನು ಹತ್ತಿಸಿಕೊಳ್ಳುವ ಈ ಬಸ್‌ಗಳು ಮತ್ತೆ ಸರ್ವೀಸ್ ರಸ್ತೆಯಲ್ಲೂ ಜನರನ್ನು ಕೂಗುವ ಅವಶ್ಯಕತೆ ಇದೆಯೇ? ಇದರಿಂದಾಗಿ ಈ ಊರುಗಳಿಗೆ ಹೋಗುವ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಹೋಗಬೇಕೋ ಅಥವಾ ಸರ್ವೀಸ್ ರಸ್ತೆಯಲ್ಲಿಯೇ ಕಾಯಬೇಕೋ ಎನ್ನುವ ಗೊಂದಲಕ್ಕೀಡಾಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net