ಬಸ್​ಗಳ ಸಂಚಾರ ಶುರು, ನಿಟ್ಟುಸಿರು ಬಿಟ್ಟ ಪ್ರಯಾಣಿಕರು

14-hvr-03
Published on

ಹಾವೇರಿ: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ಶುಕ್ರವಾರದಿಂದ ನಡೆಸುತ್ತಿದ್ದ ಮುಷ್ಕರ ಸೋಮವಾರ ಸಂಜೆ ಕೊನೆಗೊಂಡಿದ್ದು, ಬೆರಳೆಣಿಕೆಯಷ್ಟು ಬಸ್​ಗಳು ಸಂಚಾರ ಆರಂಭಿಸಿದವು.

ಜಿಲ್ಲೆಯ ಎಲ್ಲ ಘಟಕಗಳ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ಹಮ್ಮಿಕೊಂಡಿದ್ದರು. ಇದರಿಂದ ಕಳೆದ ನಾಲ್ಕು ದಿನಗಳಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಗಿತ್ತು. ಪೊಲೀಸ್ ಬಂದೋಬಸ್ತ್​ನಲ್ಲಿ ಸೋಮವಾರ ಬೆಳಗ್ಗೆ ಒಂದು, ಮಧ್ಯಾಹ್ನದ ವೇಳೆಯಲ್ಲಿ ಒಂದು ಬಸ್ ಹುಬ್ಬಳ್ಳಿ ಹಾಗೂ ರಾಣೆಬೆನ್ನೂರ ಕಡೆಗೆ ಸಂಚಾರ ಆರಂಭಿಸಿದವು. ರಾಣೆಬೆನ್ನೂರ ಹೊರತುಪಡಿಸಿ ಉಳಿದ 5 ಡಿಪೋಗಳಲ್ಲಿ ತಲಾ 2ರಂತೆ 10 ಬಸ್​ಗಳು ಸಂಚಾರ ಆರಂಭಿಸಿದ್ದವು. ಆದರೆ, ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭವಾಗದ ಕಾರಣ ಪ್ರಯಾಣಿಕರು ಬಸ್ ನಿಲ್ದಾಣದತ್ತ ಸುಳಿಯಲಿಲ್ಲ. ಬದಲಾಗಿ ಖಾಸಗಿ ವಾಹನಗಳ ಮೊರೆ ಹೋದರು.

ಸೋಮವಾರ ಬೆಳಗ್ಗೆ 11ರ ಸುಮಾರಿಗೆ ಹಾವೇರಿ ಬಸ್ ನಿಲಾಣದಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ಮಹಿಳಾ ಸಿಬ್ಬಂದಿ, ನೌಕರರು ಧರಣಿ ಆರಂಭಿಸಿದರು. ಸರ್ಕಾರದ ಯಾವುದೇ ಸೌಲಭ್ಯವಿಲ್ಲದೆ ನಮ್ಮ ಕುಟುಂಬ ಬೀದಿಗೆ ಬರುವಂತಾಗಿದೆ. ಸಂಬಳದಲ್ಲೂ ಸಾಕಷ್ಟು ಕಡಿತವಾಗುತ್ತಿದೆ. ಮನೆ ಬಾಡಿಗೆ ಕೊಡಲಾಗದೆ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ. ನಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇರೆ ಊರುಗಳಿಂದ ನಗರಕ್ಕೆ ಆಗಮಿಸಿದ್ದ ಜನತೆ ಸಾರಿಗೆ ಸಿಬ್ಬಂದಿಯ ಮುಷ್ಕರದ ಬಿಸಿ ತಟ್ಟಿತು. ಬಸ್​ಗಳಿಲ್ಲದೆ ತಮ್ಮೂರಿಗೆ ತೆರಳಲು ಪರದಾಡಿದರು. ಕೆಲವರು ಸಾರಿಗೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಕೆಲ ಪ್ರಯಾಣಿಕರು ಸಾರಿಗೆ ಅಧಿಕಾರಿಗಳ ಬಳಿ ವಾಗ್ವಾದ ನಡೆಸಿದರು. ಮುಷ್ಕರ ಮಾಡುವುದಾದರೆ ಮುಂಚಿತವಾಗಿ ಸಾರ್ವಜನಿಕವಾಗಿ ತಿಳಿಸಬೇಕಿತ್ತು. ಮುಷ್ಕರ ಮಾಡುವುದು ಎಷ್ಟು ಸರಿ? ಬಸ್ ಬಂದ್ ಆಗಿ ಎಲ್ಲಿಗೂ ಹೋಗಲಾರದ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಹರಿಹಾಯುತ್ತಿದ್ದರು.

ಖಾಸಗಿ ವಾಹನದವರು ಸಾರಿಗೆ ನೌಕರರ ಮುಷ್ಕರದ ದುರ್ಲಾಭ ಪಡೆದುಕೊಂಡಿದ್ದು, ಪ್ರಯಾಣಿಕರಿಂದ 2-3 ಪಟ್ಟು ಹೆಚ್ಚು ಹಣ ವಸೂಲಿ ಮಾಡಿ ಸಂಚಾರ ಆರಂಭಿಸಿದ್ದು ಕಂಡುಬಂತು.

ಮುಷ್ಕರ ಕೈಬಿಟ್ಟ ನಂತರ ಜಿಲ್ಲೆಯಲ್ಲಿ 60ಕ್ಕೂ ಅಧಿಕ ಬಸ್​ಗಳು ಆರಂಭಗೊಂಡಿವೆ. ನಾಳೆಯಿಂದ ಸಂಚಾರ ಯಥಾರೀತಿ ಇರಲಿದೆ. ನಾಲ್ಕು ದಿನಗಳ ಮುಷ್ಕರದಿಂದ ಸಂಸ್ಥೆಗೆ ಒಟ್ಟಾರೆ 1.50 ಕೋಟಿ ರೂ. ನಷ್ಟ ಸಂಭವಿಸಿದೆ. | ವಿ.ಎಸ್. ಜಗದೀಶ ವಿಭಾಗೀಯ ನಿಯಂತ್ರಣಾಧಿಕಾರಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net