

ವಿರಾಜಪೇಟೆ: ಖಾಸಾಗಿ ಬಸ್ ಹಾಗೂ ಆಟೋ ಸೇವೆಗಳು ಸಮಾಜಕ್ಕೆ ಪೂರಕವಾಗಿರಲಿ ಎಂದು ವಿರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹೇಳಿದರು.
ವಿರಾಜಪೇಟೆ ವೃತ್ತ ಆರಕ್ಷಕರ ಕಚೇರಿ ವತಿಯಿಂದ ನಗರದ ಮೀನುಪೇಟೆಯಲ್ಲಿರುವ ಆರಕ್ಷಕ ಸಮುಚ್ಚಯಗಳ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಖಾಸಾಗಿ ಬಸ್ ಮಾಲೀಕರು, ಕಾರ್ಮಿಕರು ಹಾಗೂ ಆಟೋ ಚಾಲಕರ ಸಭೆ ಉದ್ದೇಶಿಸಿ ಮಾತನಾಡಿದರು.
ಪ್ರತಿ ವೃತ್ತಿಯಲ್ಲೂ ಸರಿ, ತಪ್ಪುಗಳಿರುತ್ತವೆ. ಆದರೆ, ಸಾರ್ವಜನಿಕರಿಗೆ ತೊಂದರೆ ಉಂಟಾಗುವ ರೀತಿಯಲ್ಲಿ ಯಾರೂ ವರ್ತಿಸಬಾರದು. ಖಾಸಗಿ ಬಸ್ ಹಾಗೂ ಆಟೋ ನಂಬಿ ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಹೆಚ್ಚಿನ ಸಂಪಾದನೆಯ ಭರದಲ್ಲಿ ವೈಮನಸ್ಸುಗಳು ಉಂಟಾಗಬಾರದು. ಸಾರ್ವಜನಿಕರಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸಿಕೊಂಡು ಹೋಗಬೇಕು ಎಂದರು.
ಖಾಸಾಗಿ ಬಸ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಜ್ಯೂಡಿವಾಜ್ ಮಾತನಾಡಿ, ಖಾಸಾಗಿ ಬಸ್ ನಿಲ್ದಾಣದಲ್ಲಿ ದಿನದಿಂದ ದಿನಕ್ಕೆ ಖಾಸಗಿ ವಾಹನಗಳ ನಿಲುಗಡೆ ಹೆಚ್ಚಾಗುತ್ತಿದೆ. ಇದರಿಂದ ಬಸ್ ನಿಲುಗಡೆಗೆ ತೊಂದರೆಯಾಗುತ್ತಿದೆ. ಖಾಸಗಿ ವಾಹನಗಳ ನಿಲುಗಡೆ ನಿಷೇಧಿಸಬೇಕು ಹಾಗೂ ಭದ್ರತೆಯ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದರು.
ಆಟೋ ಚಾಲಕರ ಸಂಘದ ಪ್ರಮುಖರಾದ ಜೀವನ್ ಮಾತನಾಡಿ, ನಗರದಲ್ಲಿರುವ ಆಟೋಗಳಿಗೆ 15 ಕಿಮೀ ವ್ಯಾಪ್ತಿಯಲ್ಲಿ ಚಾಲನೆಗೆ ಸಾರಿಗೆ ಇಲಾಖೆಯ ಅನುಮತಿಯಿದೆ. ಆದರೆ, ಪಟ್ಟಣದಿಂದ ಹೊರ ಹೋದ ಕೂಡಲೇ ಪೊಲೀಸ್ ಇಲಾಖೆಯಿಂದ ದಂಡ ವಿಧಿಸಲಾಗುತ್ತದೆ. ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಅಮ್ಮಣಕುಟ್ಟಂಡ ಬೋಪಣ್ಣ, ಜೈ ಭಾರತ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬೀಕಚಂಡ ಪುಟ್ಟ ಬೆಳ್ಯಪ್ಪ, ವಿರಾಜಪೇಟೆ ಖಾಸಾಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ ಕುಂಬೇಯಂಡ ಸುರೇಶ್ ದೇವಯ್ಯ, ವಿರಾಜಪೇಟೆ ನಗರ ಠಾಣೆಯ ಪಿಎಸ್‌ಐ ವಾಣಿಶ್ರೀ, ಗ್ರಾಮಾಂತರ ಆರಕ್ಷಕ ಠಾಣೆಯ ಪಿಎಸ್‌ಐ ಎನ್.ಕೆ.ಲತಾ, ಖಾಸಗಿ ಬಸ್ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಮಾಲೀಕರು, ಕಾರ್ಮಿಕರು, ಆಟೋ ಚಾಲಕರು ಇದ್ದರು.