ಬೆಣ್ಗೆರೆ ನಾಗಮಂಡಲೋತ್ಸವಕ್ಕೆ ಹೊರೆಕಾಣಿಕೆ ಸಮರ್ಪಣೆ

nagamandalotsava
ಶ್ರೀ ನಾಗ ದೇವಸ್ಥಾನಕ್ಕೆ ಪುರಮೆರವಣಿಗೆ ಮೂಲಕ ಹಸಿರು ಹೊರೆಕಾಣಿಕೆ ಸಮರ್ಪಿಸಲಾಯಿತು.
Published on

ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದಲ್ಲಿ ನಾಗಮಂಡಲೋತ್ಸವ ಸುವರ್ಣ ಮಹೋತ್ಸವ ಪ್ರಯುಕ್ತ ಶ್ರೀ ನಾಗದೇವರ ಜೀರ್ಣಾಷ್ಟಬಂಧ ಪುರ:ಸರ ಪುನರ್ ಪ್ರತಿಷ್ಠಾಪನೆ ಮಹೋತ್ಸವ, ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಅಂಗವಾಗಿ ಶ್ರೀ ನಾಗ ದೇವಸ್ಥಾನಕ್ಕೆ ಪುರಮೆರವಣಿಗೆ ಮೂಲಕ ಹಸಿರು ಹೊರೆಕಾಣಿಕೆ ಶನಿವಾರ ಸಮರ್ಪಿಸಲಾಯಿತು. ಶೃಂಗೇರಿ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಹಾಗೂ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿ ಪರಮಾನುಗ್ರಹದೊಂದಿಗೆ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಉಮೇಶ್ ಎಲ್.ಮೇಸ್ತ ಚಾಲನೆ ನೀಡಿದರು. ತ್ರಾಸಿ ಸರ್ಕಲ್‌ನಿಂದ ಆರಂಭಗೊಂಡ ಹೊರೆಕಾಣಿಕೆ ಮೆರವಣಿಗೆ ತ್ರಾಸಿ-ಗಂಗೊಳ್ಳಿ ಮುಖ್ಯ ರಸ್ತೆಯಲ್ಲಿ ಸಾಗಿ ಬೆಣ್ಗೆರೆ ಕ್ರಾಸ್ ಮೂಲಕ ಶ್ರೀ ನಾಗ ದೇವಸ್ಥಾನ ತಲುಪಿತು. ವಿವಿಧೆಡೆಗಳಿಂದ ಆಗಮಿಸಿದ ನೂರಾರು ಸಂಖ್ಯೆಯ ಹಸಿರು ಹೊರೆಕಾಣಿಕೆ ಹೊತ್ತ ವಾಹನಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ವೀರಗಾಸೆ, ಕುಣಿತ ಭಜನೆ, ಚಂಡೆ ವಾದನ, ವಾದ್ಯ, ತಟ್ಟಿರಾಯ ವಿವಿಧ ವೇಷಭೂಷಣಗಳು ಮೆರವಣಿಗೆ ವೈಭವ ಹೆಚ್ಚಿಸಿತು. ಸಾರ್ವಜನಿಕ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಗಣಪತಿ ವಿ.ಮೇಸ್ತ, ಶ್ರೀ ನಾಗ ದೇವಸ್ಥಾನ ಸೇವಾ ಸಮಿತಿ ಸದಸ್ಯರು, ಸಾರ್ವಜನಿಕ ಸುವರ್ಣ ಮಹೋತ್ಸವ ಸಮಿತಿ ಸದಸ್ಯರು, ನಾಗಶ್ರೀ ಮಹಿಳಾ ಮಂಡಳಿ ಸದಸ್ಯರು, ಚಾರೋಡಿ ಮೇಸ್ತ ಸಮಾಜದವರು, ವಿವಿಧ ಸಮಾಜದ ಮುಖಂಡರು, ಭಕ್ತರು ಹಸಿರು ಹೊರೆಕಾಣಿಕೆ ಪುರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

31ರಂದು ನಾಗಮಂಡಲೋತ್ಸವ

31ರಂದು ಬೆಳಗ್ಗೆ ಗುರುಗಣಪತಿ ಪೂಜೆಯೊಂದಿಗೆ ಅಷ್ಟಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದ್ದು, ಚತುರ್ವೇದ ಪಾರಾಯಣ, ಬ್ರಹ್ಮಕಲಶ ಸ್ಥಾಪನೆ, ಆಯುತ ಸಂಖ್ಯಾ ತಿಲಹೋಮ, ಪವಮಾನ ಹೋಮ, ಸರ್ಪಸೂಕ್ತ ಹೋಮ, ಸುಬ್ರಹ್ಮಣ್ಯ ಹೋಮ, ಪ್ರಧಾನ ಅಧಿವಾಸ ಹೋಮ, ಕಲಶಾಭಿಷೇಕ, ಕಲ್ಪೋಕ್ತ ಮಹಾಪೂಜೆ, ಮಹಾಮಂಗಳಾರತಿ, ನಾಗದೇವರ ಸಂದರ್ಶನ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 7 ಗಂಟೆಗೆ ಹಾಲಿಟ್ಟು ಸೇವೆ, ರಾತ್ರಿ 8.30ಕ್ಕೆ ಅಷ್ಟಪವಿತ್ರ ನಾಗ ಮಂಡಲೋತ್ಸವ, ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

ಭರದ ಸಿದ್ಧತೆ

ನಾಗಮಂಡಲೋತ್ಸವಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಸಮಾಜವರು, ಗ್ರಾಮಸ್ಥರು ಹಾಗೂ ಭಕ್ತರು ಸ್ವಯಂಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಸ್ವಚ್ಛತೆ ಹಾಗೂ ಇನ್ನಿತರ ಕಾರ್ಯಕ್ರಮದ ತಯಾರಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಹಾ ಅನ್ನಸಂತರ್ಪಣೆಗೆ ಅಂದಾಜು 20 ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದು, ಎಲ್ಲರೂ ಕುಳಿತುಕೊಂಡು ಅನ್ನಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ನಾಗಮಂಡಲೋತ್ಸವ ಯಶಸ್ವಿಯಾಗಿ ನಡೆಯಲು ಸೇವಾ ಸಮಿತಿ ಹಾಗೂ ಸುವರ್ಣ ಮಹೋತ್ಸವ ಸಮಿತಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net