ಬನ್ನಿ ಮರಗಳೇ ತುಂಬಿದ್ದ ಬನ್ನಿಕುಪ್ಪೆ

Kailancha Ph-04-Bannikuppe Gramayana- Story Photo Jodi Basaveswara Temple - 24-12-2023
Published on
  • ಕುಂಬಾರಿಕೆಯಲ್ಲಿ ಛಾಪು ಮೂಡಿಸಿದ್ದ ಗ್ರಾಮ
  • ಹಿಂದು-ಮುಸ್ಲಿಂ ಸೌಹಾರ್ಧತೆಗೆ ಮತ್ತೊಂದು ಹೆಸರು

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ


ಶೈಕ್ಷಣಿಕ, ಧಾರ್ಮಿಕ, ರಂಗಭೂಮಿ, ಕುಂಬಾರಿಕೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿ ಜಿಲ್ಲೆಯ ಪ್ರಮುಖ ಗ್ರಾಮವಾಗಿ ಗುರ್ತಿಸಿಕೊಂಡು ಸದ್ದಿಲ್ಲದೆ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಗ್ರಾಮವೇ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ.

ಹಿಂದೆ ಬಡವರ ಮನೆಯ ಸೂರಿಗೆ ನೆರಳು ಒದಗಿಸಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣ ನೀಡಿದ ಗ್ರಾಮ. ಜತೆಗೆ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಪ್ರಾಥಮಿಕ ಶಿಕ್ಷಣ ಪಡೆದ ಗ್ರಾಮ ಹಾಗೂ ಮಾಜಿ ಶಾಸಕ ದಿವಂಗತ ಪುಟ್ಟಸ್ವಾಮಿಗೌಡರ ಹುಟ್ಟೂರು ಕೂಡ ಬನ್ನಿಕುಪ್ಪೆ.

ಬನ್ನಿಕುಪ್ಪೆ ಗ್ರಾಮ ಜಿಲ್ಲಾ ಕೇಂದ್ರದಿಂದ 7 ಕಿ.ಮೀ. ದೂರದಲ್ಲಿದೆ. ಪ್ರಾಥಮಿಕ ಶಾಲೆ, ಕೆಂಗಲ್ ಆಂಜನೇಯ ಗ್ರಾಮಾಂತರ ಪ್ರೌಢಶಾಲೆ, ಗ್ರಾಪಂ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಶಾಲಾ ಮಕ್ಕಳ ವಸತಿ ನಿಲಯ, ಪಶು ಆಸ್ಪತ್ರೆ, ಹಾಲಿನ ಡೇರಿ, ವ್ಯವಸಾಯ ಸೇವಾ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ.

ಹಿಂದೆ ಗ್ರಾಮದ ಹಲವು ಕುಟುಂಬಗಳು ಕುಂಬಾರಿಕೆ ಮಾಡುತ್ತಿದ್ದವು. ನಾಡಹೆಂಚು ತಯಾರಿಸಿ ಬಡವರ ಮನೆಯ ಸೂರಿಗೆ ಆಸರೆ ಒದಗಿಸಿಕೊಟ್ಟಿದ್ದು ಈ ಕುಟುಂಬಗಳು. ಮಂಡ್ಯ, ಈಗಿನ ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಈ ಗ್ರಾಮದಲ್ಲಿ ತಯಾರಾಗುತ್ತಿದ್ದ ನಾಡಹೆಂಚುಗಳೇ ಮನೆಗಳ ಸೂರಿಗೆ ಬಳಕೆಯಾಗುತ್ತಿದ್ದವು. ಕಾಲಕ್ರಮೇಣ ಆಧುನಿಕತೆ ಅಡಿಯಿಡುತ್ತಿದ್ದಂತೆ ಗ್ರಾಮದಲ್ಲಿ ಒಂದೆರಡು ಕುಟುಂಬಗಳನ್ನು ಹೊರತುಪಡಿಸಿ ಕುಂಬಾರಿಕೆ ಸ್ಥಗಿತಗೊಂಡಿದೆ. ಕುಂಬಾರಿಕೆ ಮಾಡುತ್ತಿರುವ ಕುಟುಂಬಗಳು ಕೂಡ ಗಣೇಶಮೂರ್ತಿಗಳ ತಯಾರಿಕೆಗಷ್ಟೇ ಸೀಮಿತವಾಗಿವೆ.

ನಾಡಹೆಂಚಿನ ಮನೆಗಳಿದ್ದ ಗ್ರಾಮ ಇಂದು ಅಭಿವೃದ್ಧಿ ಕಂಡಿದೆ. ಎಲ್ಲ ಜಾತಿ, ಧರ್ಮದ ಜನರು ಸೌಹಾರ್ದತೆಯಿಂದ ಬದುಕು ಕಟ್ಟಿಕೊಂಡಿರುವುದು ಮತ್ತೊಂದು ವಿಶೇಷ. ಮುಂದೊಂದು ದಿನ ಹೋಬಳಿ ಕೇಂದ್ರವಾಗುವ ಅವಕಾಶಗಳೂ ಇವೆ. ಹಿಂದುಗಳು ಹಾಗೂ ಇತ್ತೀಚಿನ ವರ್ಷಗಳವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಕುಟುಂಬಗಳಿದ್ದವು. ನಂತರ ಹೆಚ್ಚಿನ ಮುಸ್ಲಿಂ ಕುಟುಂಬಗಳು ನಗರ ಪ್ರದೇಶಕ್ಕೆ ವಲಸೆ ಹೋಗಿದ್ದು, ಐದಾರು ಕುಟುಂಬಗಳು ಮಾತ್ರ ಗ್ರಾಮದಲ್ಲಿ ವಾಸವಾಗಿವೆ.

ಗ್ರಾಮದ ಇತಿಹಾಸ

ಹಿಂದೆ ಗ್ರಾಮದಲ್ಲಿ ಅರಣ್ಯದಂತೆ ಬನ್ನಿಮರಗಳು ಇದ್ದವಂತೆ. ಇಂತಹ ಸ್ಥಳವನ್ನು ಟಿಪ್ಪು ಆಡಳಿತದ ಅವಧಿಯಲ್ಲಿ ಜನರಿಗೆ ಜಹಗೀರ್ ಆಗಿ ನೀಡಿದನೆಂದು ಹೇಳುತ್ತಾರೆ. ಒಡ್ಡುಗಳ ರೀತಿಯಲ್ಲಿ ಗ್ರಾಮದ ಮಧ್ಯೆ ಬನ್ನಿಮರಗಳು ಆವೃತ್ತವಾಗಿದ್ದ ಕಾರಣ ಬನ್ನಿಕುಪ್ಪೆ ಎಂದು ಕರೆಯಲಾಗುತ್ತದೆ. ಈಗಲೂ ಗ್ರಾಮದ ಅಕ್ಕಪಕ್ಕ, ಗ್ರಾಮದ ಮಧ್ಯೆ ಬನ್ನಿಮರಗಳನ್ನು ಕಾಣಬಹುದಾಗಿದೆ. ಗ್ರಾಮದ ಮಧ್ಯೆ ಇರುವ ಬನ್ನಿ ಮರಕ್ಕೆ ಅಶ್ವತ್ಥಕಟ್ಟೆ ಕಟ್ಟಲಾಗಿದ್ದು, ವಿಜಯದಶಮಿ ಹಬ್ಬದಂದು ಬನ್ನಿ ಮರವನ್ನು ಪೂಜಿಸಲಾಗುತ್ತದೆ. 400 ವರ್ಷಗಳ ಹಿಂದಷ್ಟೇ ಗ್ರಾಮ ನಿರ್ಮಾಣವಾಗಿದೆ. ಗ್ರಾಮದ ಮಧ್ಯೆ ಭಾಗ ಕೆಲವು ಶಿಲಾಶಾಸನಗಳಿದ್ದರೂ ಅದರಿಂದ ಇತಿಹಾಸ ತಿಳಿಯಲು ಸಾಧ್ಯವಾಗಿಲ್ಲ. ಈ ಬನ್ನಿಮರಗಳ ತೋಪಿನಲ್ಲಿ ಬೃಹತ್ ಸಂತೆ ನಡೆಯುತ್ತಿತ್ತಂತೆ. ಗ್ರಾಮದಲ್ಲಿ ಬೇರೆ ಕಡೆಯಿಂದ ಬಂದವರೇ ನೆಲೆ ಕಂಡುಕೊಂಡವರೇ ಹೆಚ್ಚು.

ದೇವಾಲಯಗಳ ಇತಿಹಾಸ

ಗ್ರಾಮದ ಮಧ್ಯೆ ಉತ್ತರಾಭಿಮುಖವಾಗಿ ಆಂಜನೇಯ ದೇವಾಲಯವಿದೆ. ಆದರೆ ದೇವಾಲಯ ಅಭಿವೃದ್ಧಿ ಕಂಡಿಲ್ಲ. ಹಿಂದೆ ಪ್ರಾಥಮಿಕ ಶಾಲೆ ಕೂಡ ಇದೇ ದೇವಾಲಯದಲ್ಲಿ ನಡೆಯುತ್ತಿತ್ತು. ಕೆಂಗಲ್ ಹನುಮಂತಯ್ಯ ಕೂಡ ಇಲ್ಲೇ ವ್ಯಾಸಂಗ ಮಾಡಿದ್ದರು. ಗ್ರಾಮದ ಪಕ್ಕದಲ್ಲೇ ದತ್ತಾತ್ರೇಯ ದೇವಾಲಯ ಇದ್ದು ಪ್ರತೀವರ್ಷ ಅದ್ದೂರಿಯಾಗಿ ದತ್ತ ಜಯಂತಿ ಆಚರಿಸಲಾಗುತ್ತದೆ.
ಜಿಲ್ಲೆಯಲ್ಲಿಯೇ ಅಪರೂಪ ಎನ್ನಲಾದ ಗುಂಡು ಕಲ್ಲುಗಳಲ್ಲಿ ಉದ್ಭವವಾಗಿರುವ ಜೋಡಿ ಬಸವೇಶ್ವರ ದೇವಾಲಯ ಗ್ರಾಮದಲ್ಲಿರುವುದು ವಿಶೇಷ. ಹಿಂದೆ ಮಹಿಳೆಯೊಬ್ಬರು ಬುಟ್ಟಿಯಲ್ಲಿ ಎರಡು ಗುಂಡುಕಲ್ಲುಗಳನ್ನು ಹೊತ್ತು ಒಯ್ಯಬೇಕಾದರೆ ಈ ದೇವಾಲಯದ ಸ್ಥಳದಲ್ಲಿ ಬಿದ್ದಾಗ ಮತ್ತೆ ಎತ್ತಿಕೊಳ್ಳಲು ಸಾಧ್ಯವಾಗದೆ ಅಲ್ಲೇ ಉಳಿದವು. ನಂತರ ಅಲ್ಲಿ ದೇವಾಲಯ ಕಟ್ಟಲಾಯಿತು ಎನ್ನುವುದು ಗ್ರಾಮದ ಹಿರಿಯ ಮಾತು.

ಆರೋಗ್ಯ ಸಂಜೀವಿನಿ ನೀರು

ಗ್ರಾಮದ ಪಕ್ಕದಲ್ಲಿ ಪುರಾತನ ತಾಯಮ್ಮನ ಕೊಳವಿದೆ. ಕೊಳ ಕೆರೆಯ ಅಂಗಳದಲ್ಲಿದ್ದು, ನೀರಿಲ್ಲದೆ ಬರಡಾಗಿದೆ. ಈ ಕೊಳದ ನೀರು ಕುಡಿದರೆ ಆರೋಗ್ಯ ಸಮಸ್ಯೆಗಳು ದೂರಾಗುತ್ತಿದ್ದವು. ಜತೆಗೆ ಈ ಕೊಳದಲ್ಲಿ ಸಿಗುತ್ತಿದ್ದ ಸಿಹಿ ನೀರನ್ನು ಸುತ್ತಮುತ್ತಲ ಐದಾರು ಕಿಮೀ ದೂರಿದಿಂದ ಬಂದು ಜನರು ಒಯ್ಯುತ್ತಿದ್ದರು ಎಂದು ಹೇಳುತ್ತಾರೆ ಗ್ರಾಮದ ಚಂದ್ರಗಿರಿ.

ರಂಗಭೂಮಿ ಸಂಗೀತ ದಿಗ್ಗಜ

ರಂಗಭೂಮಿ ಕ್ಷೇತ್ರದಲ್ಲಿ ಗುರುಮೂರ್ತಪ್ಪ ಎಂಬ ಸಂಗೀತಗಾರರ ಹೆಸರು ಕೇಳದವರೇ ಇಲ್ಲ. ರಂಗಭೂಮಿಯಲ್ಲಿ ತನ್ನದೇ ಆದ ಛಾಪು ಮೂಡಿಸಿ ಗುಬ್ಬಿ ನಾಟಕ ಕಂಪನಿಯಲ್ಲಿ ಸಂಗೀತಗಾರರಾಗಿ ಗುರ್ತಿಸಿಕೊಂಡು ರಾಮನಗರ, ಮಂಡ್ಯ ಜಿಲ್ಲೆಯಲ್ಲಿ ನಾಟಕ ನಿರ್ದೇಶನ ಮಾಡುತ್ತಿದ್ದ ಇವರು ನಿರ್ದೇಶಕರು, ಸಂಗೀತಗಾರರನ್ನು ಬೆಳೆಸಿದ ಕೀರ್ತಿ ಇವರದು. ಇವರು ಬನ್ನಿಕುಪ್ಪೆ ಗ್ರಾಮದವರು ಎನ್ನುವುದು ಹೆಗ್ಗಳಿಕೆ

ಪ್ರೌಢಶಾಲೆ

1965ರಲ್ಲೇ ಬನ್ನಿಕುಪ್ಪೆ ಗ್ರಾಮದಲ್ಲಿ ರಂಗಪ್ಪ ಎಂಬ ಶಿಕ್ಷಕರು ದೇಣಿಗೆ ಸಂಗ್ರಹಿಸಿ ಕೆಂಗಲ್ ಆಂಜನೇಯ ಗ್ರಾಮಾಂತರ ಪ್ರೌಢಶಾಲೆ ಪ್ರಾರಂಭಿಸಿ ಇಡೀ ರಾಮನಗರ ಮತ್ತು ಕೈಲಾಂಚ ಹೋಬಳಿ ಗ್ರಾಮಗಳ ಅಂದಿನ ವಿದ್ಯಾರ್ಥಿಗಳಿಗೆ ಪ್ರೌಢಶಿಕ್ಷಣ ದೊರೆಯುವಂತೆ ಮಾಡಿದ ಕೀರ್ತಿ ಕೂಡ ಗ್ರಾಮಕ್ಕಿದೆ.

ಮತ್ತಷ್ಟು ಅಭಿವೃದ್ಧಿ ಬೇಕು

ಗ್ರಾಮದಲ್ಲಿ ಬಹುಪಾಲು ಜನರಿಗೆ ಕೃಷಿಯೇ ಜೀವಾಳ. ಗ್ರಾಮದ ಪಕ್ಕದಲ್ಲೇ ದೊಡ್ಡ ಕೆರೆ ಇದ್ದರೂ ನೀರಿಲ್ಲದೆ ಕೃಷಿ ಮಾಡಲಾಗುತ್ತಿಲ್ಲ. ಸರ್ಕಾರ ಕೆರೆ ತುಂಬಿಸುವ ಯೋಜನೆಯಲ್ಲಿ ಗ್ರಾಮದ ಕೆರೆಗೆ ಶಿಂಷಾ ಇಲ್ಲ ಕಾವೇರಿ ನದಿ ನೀರು ಹರಿಸಿದರೆ ಗ್ರಾಮದ ರೈತರ ಜೀವನಾಡಿಯಾಗುತ್ತದೆ ಎನ್ನುತ್ತಾರೆ ಮಂಡಿ ದೇವರಾಜು.


ಬನ್ನಿಕುಪ್ಪೆ ಗ್ರಾಮ ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸದಾ ಮುಂದಿದೆ. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಓದಿದ ಗ್ರಾಮ, ಜತೆಗೆ ಮಾಜಿ ಶಾಸಕ ಪುಟ್ಟಸ್ವಾಮಿಗೌಡರ ಹುಟ್ಟೂರು. ಹಿಂದು - ಮುಸ್ಲಿಂ ಸೌಹಾರ್ದದಿಂದ ಬದುಕಿದ ಗ್ರಾಮ ಎನ್ನುವುದು ಹೆಮ್ಮೆ.
ಶ್ರೀನಿವಾಸ್, ಬನ್ನಿಕುಪ್ಪೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net