

ಚೇಳೂರು: ಈಗ ಕೆಂಪು ಸುಂದರಿಗೆ ಮತ್ತೆ ಭಾರಿ ಬೆಲೆ ಬಂದಿದೆ. ಆಗಸ್ಟ್ ಮೊದಲ ವಾರದಲ್ಲಿ ಕಡಿಮೆಯಾಗಿದ್ದ ಟೊಮ್ಯಾಟೊ ಬೆಲೆ ಎರಡನೇ ವಾರದಿಂದ ಏರಿಕೆ ಕಾಣುತ್ತಲೇ ಇದೆ. ಈಗ 100 ರೂ. ಆಸುಪಾಸು ತಲುಪಿದೆ.
ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಗಗನಕ್ಕೇರುತ್ತಿದ್ದು, 15 ಕೆಜಿ ಬಾಕ್ಸ್ ಸಾವಿರ ರೂ. ಗಡಿ ದಾಟಿದೆ. ಇತ್ತ ಮಾರುಕಟ್ಟೆಗೆ ಬರುವ ಆವಕ ಕಡಿಮೆಯಾಗುತ್ತಿರುವುದು ಬೆಲೆ ಏರಿಕೆ ಕಾರಣ ಎನ್ನಲಾಗಿದೆ.
ಪ್ರತಿದಿನ ಮಾರುಕಟ್ಟೆಗೆ 65ರಿಂದ 75 ಸಾವಿರ ಟೊಮ್ಯಾಟೊ ಬಾಕ್ಸ್‌ಗಳನ್ನು ಬರುತ್ತವೆ. ಆದರೆ, ಅಪರೂಪಕ್ಕೊಮ್ಮೆ ಹೆಚ್ಚು ಬಾಕ್ಸ್ ಗಳು ಬಂದರೆ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ಉತ್ತಮ
ಟೊಮ್ಯಾಟೊ ಎಂದೇ ಹೆಸರಾಗಿರುವ ಸಾಹೋ ಹೆಸರಿನ ತಳಿ 15 ಕೆ.ಜಿ. ಬಾಕ್ಸ್‌ಗೆ 800 ರೂ.ಗಳಿಂದ 1000 ರೂ.ವರೆಗೂ ಮಾರಾಟವಾಗುತ್ತಿದೆ.
ಕಳಪೆ ಹಣ್ಣಿಗೂ ಬೆಲೆ
ಮಾರುಕಟ್ಟೆಯಲ್ಲಿ ಹಣ್ಣನ್ನು ಬೇರ್ಪಡಿಸುವಾಗ, ಕೈಬಿಟ್ಟ ಕಳಪೆ ಟೊಮ್ಯಾಟೊ ಸಹ 15 ಕೆ.ಜಿ. ಬಾಕ್ಸ್‌ಗೆ 400 ರೂ.ಗಳಿಗೂ ಬಿಕರಿಯಾಗಿರುವುದು ವಿಶೇಷ. ಪ್ರಸ್ತುತ ಬೆಲೆ ಏರಿಕೆಗೆ ಕಾರಣವೆಂದರೆ ಕೆಲವೆಡೆ ವಿಪರೀತ ಮಳೆ ಹಿನ್ನೆಲೆಯಲ್ಲಿ ಬೆಳೆ ಕೈಕೊಟ್ಟಿದ್ದು, ಮಾರುಕಟ್ಟೆಗೆ ಆವಕ ಕಡಿಮೆಯಾಗಿದೆ. ಹೀಗಾಗಿ ಬೆಲೆಯಲ್ಲಿ ಏರಿಕೆ ಕಂಡಿದೆ. ಮುಂದಿನ
ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದೆಂಬ ನಿರೀಕ್ಷೆ ಬೆಳೆಗಾರರದ್ದಾಗಿದೆ. ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಬೆಲೆಯಿಂದ ರೈತರು ಮತ್ತು ಕಮಿಷನ್ ಏಜೆಂಟರ ಮೊಗದಲ್ಲೂ ಮಂದಹಾಸ ಮೂಡಿದೆ. ಕಳೆದ ಜುಲೈನಲ್ಲಿ ಇಳುವರಿ ಹೆಚ್ಚಾದ ಕಾರಣ ಮಾರುಕಟ್ಟೆಗೆ ಬಂದು ಬೆಲೆ ಸಿಗದೆ ಪರದಾಡಿದ ರೈತರು, ಮಾರುಕಟ್ಟೆಯಲ್ಲಿ ರಾಶಿ ರಾಶಿ ಟೊಮ್ಯಾಟೊ ಎಸೆದು ಹೋಗಿದ್ದ ರೈತರಿಗೆ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಉತ್ತಮ ಬೆಲೆ ಸಿಕ್ಕಿದೆ.
ಕೆಲವೆಡೆ ಮಳೆ ಇಲ್ಲ, ಬೆಳೆಯೂ ಇಲ್ಲ. ಇನ್ನು ಕೆಲವೆಡೆ ಮಳೆ ಜಾಸ್ತಿಯಾಗಿ ಬೆಳೆದ ಬೆಳೆ ಕೈಗೆ ಸಿಗದ ಕಾರಣ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ಹಾಗಾಗಿ ಬೆಳೆಗಾರರು ಸಂತಸದಲ್ಲಿದ್ದಾರೆ. ಇಳುವರಿ ಕಡಿಮೆ ಇರುವ ಕಾರಣ ಬೆಲೆಯಲ್ಲಿ ಹೆಚ್ಚಳವಾಗಿದೆ.
- ಮದ್ದಿರೆಡ್ಡಿ ಕಮಿಷನ್ ಏಜೆಂಟ್
ಹೊರ ರಾಜ್ಯಗಳಿಗೆ ಟೊಮ್ಯಾಟೋ ಸರಬರಾಜಾಗುತ್ತಿದೆ. ಇದರಿಂದ ಬೆಲೆ ಏರಿಕೆಯಾಗಿದೆ. ರೈತರು ಮಳೆ ಮತ್ತು ಕೊಳವೆಬಾವಿಗಳಲ್ಲಿ ನೀರಿಲ್ಲದೆ ಬೆಳೆದ ಟೊಮ್ಯಾಟೋಗೆ ಬೆಲೆ ಸಿಗದೆ ಪರದಾಡುತ್ತಿದ್ದರು. ಕಳೆದ ಆಗಸ್ಟ್‌ನಲ್ಲಿ ಬೆಲೆ ಇಲ್ಲದೆ ಪರದಾಡಿದ್ದರೂ ಇದೀಗ ಒಳ್ಳೆಯ ಬೆಲೆ ಬಂದಿರುವುದು ಸಂತಸ ತಂದಿದೆ.
- ಮೀಸಾಲು ಎಂ.ವಿ.ರಮೇಶ್ ಪ್ರಗತಿಪರ ರೈತ, ಸಿ.ಹೊಸಹುಡ್ಯ, ಚೇಳೂರು