

ವಿಜಯಪುರ: ಉತ್ತರ ಕರ್ನಾಟಕದ ಏಕೈಕ ಸೈನಿಕ ಶಾಲೆ ಖ್ಯಾತಿಯ ವಿಜಯಪುರದ ಸೈನಿಕ ಶಾಲೆಯಲ್ಲಿ ಈಜುಕೊಳ ನಿರ್ಮಿಸಲು 1.65 ಕೋಟಿ ರೂಪಾಯಿ ಮಂಜೂರಿಸಿದ್ದಾಗಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಈ ಅನುದಾನ ಮಂಜೂರಿಸಿದ್ದು, ಇದರಿಂದ ಸೈನಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.
ಸೈನಿಕ ಶಾಲೆಯಲ್ಲಿ ಈಜುಗೊಳ ಇಲ್ಲದಿರುವುದು ಮತ್ತು ಅದರ ಅವಶ್ಯಕತೆ ಕುರಿತು ಈ ಹಿಂದೆ ಶಾಲೆ ಸಿಬ್ಬಂದಿ ಪ್ರಬಲವಾದ ಬೇಡಿಕೆ ಇರಿಸಿದ್ದರು. ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸಚಿವರಲ್ಲಿ ಮನವಿ ಮಾಡಲಾಗಿ ಈಜು ಕೊಳ ನಿರ್ಮಾಣಕ್ಕಾಗಿ ‘ಒಂದು ಶಾಲೆ, ಒಂದು ಕ್ರೀಡೆ’ ಯೋಜನೆಯಡಿ ಅಂದಾಜು 1.65 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಿದ್ದಾರೆ. ಸೈನಿಕ ಶಾಲೆ ಹಾಗೂ ಜಿಲ್ಲೆ ಜನರ ಪರವಾಗಿ ಸಚಿವ ರಾಜನಾಥ ಸಿಂಗ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಜಿಗಜಿಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.