ಪ್ರಧಾನಿ ಮೋದಿ ಸಾಧನೆ ನೋಡಬೇಕೇ? ಹಾಗಾದರೆ ವಿಜಯಪುರಕ್ಕೆ ಬನ್ನಿ ಎಂದು ಕಾಂಗ್ರೆಸ್‌ಗೆ ಸಂಸದ ರಮೇಶ ಜಿಗಜಿಣಗಿ ಸವಾಲು

HONAGANAHLLI ROB INNOGRATION

ವಿಜಯಪುರ: ‘ಮಾತೆತ್ತಿದರೆ ಪ್ರಧಾನಿ ನರೇಂದ್ರ ಮೋದಿ ಏನು ಅಭಿವೃದ್ಧಿ ಮಾಡಿದ್ದಾರೆ?’ ಎನ್ನುವವರು ವಿಜಯಪುರ ಜಿಲ್ಲೆಯಲ್ಲಾಗಿರುವ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನೊಮ್ಮೆ ನೋಡಲಿ ಎಂದು ಸಂಸದ ರಮೇಶ ಜಿಗಜಿಣಗಿ ಕಾಂಗ್ರೆಸ್ ಮುಖಂಡರಿಗೆ ಸವಾಲೆಸೆದರು.

ಮಂಗಳವಾರ ಇಲ್ಲಿನ ವಿಜಯಪುರ-ಬಾಗಲಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸವನಹಳ್ಳಿ-ಹೊನಗಹಳ್ಳಿ ಸಮೀಪದಲ್ಲಿ ಅಂದಾಜು 71 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆ ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯಪುರ ನಗರದ ಸುತ್ತಲೂ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ವಜ್ರಹನುಮಾನ್ ರೈಲ್ವೆ ಮೇಲ್ಸೇತುವೆ, ಇಬ್ರಾಹಿಂಪುರ ರೈಲ್ವೆ ಗೇಟ್ ಸೇರಿದಂತೆ ಹಲವು ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ಸೋಲಾಪುರ ಚತುಷ್ಪಥ ಹೆದ್ದಾರಿ ಮತ್ತು ಮೇಲ್ಸೇತುವೆ ಕಾಮಗಾರಿ, ವಿಜಯಪುರ ನಗರದ ವರ್ತುಲ ರಸ್ತೆ, ಅಥಣಿ ಹೆದ್ದಾರಿ, ವಿಜಯಪುರ-ಹುಬ್ಬಳ್ಳಿ ಚತುಷ್ಪಥ ಹೆದ್ದಾರಿ, ವಿಮಾನ ನಿಲ್ದಾಣ, ಎನ್‌ಟಿಪಿಸಿ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ಹೆಮ್ಮೆಯಿಂದ ನುಡಿದರು.

ಭಾವುಕರಾದ ಜಿಗಜಿಣಗಿ

‘ಸುದೀರ್ಘ 45 ವರ್ಷಗಳ ಕಾಲ ದಲಿತನಾದ ನನ್ನನ್ನು ಎತ್ತಿ ಬೆಳೆಸಿದ ಜನರ ಋಣ ತೀರಿಸಲು ಹಗಲಿರುಳು ಶ್ರಮಿಸಿದ್ದೇನೆ. ಯಾವುದೋ ಒಂದು ಜಾತಿಯಿಂದ ರಾಜಕಾರಣ ಸಾಧ್ಯವಿಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋದಾಗ ರಾಜಕೀಯವಾಗಿ ಸಾಧಿಸಲು ಸಾಧ್ಯ. ಅಂತೆಯೇ ನನ್ನ ಗೆಲುವಿಗೆ ಜನರ ಆಶೀರ್ವಾದವೇ ಕಾರಣ. ನಾನು ಗೆದ್ದಿಲ್ಲ; ಗೆಲ್ಲಿಸಿದ್ದೀರಿ, ನಾನು ನಾಯಕನಲ್ಲ; ನಾಯಕ ಮಾಡಿದ್ದೀರಿ, ಇಷ್ಟೆಲ್ಲಾ ಅಭಿವೃದ್ಧಿ ಆಗಿದ್ದು ಅದು ನನ್ನಿಂದ ಅಲ್ಲ; ನೀವು ಕೊಟ್ಟ ಅಧಿಕಾರದಿಂದ, ಹೀಗಾಗಿ ಈ ಅಭಿವೃದ್ಧಿಗೆ ಕಾರಣ ನಾನಲ್ಲ ನೀವು…’ ಎಂದಾಗ ಜಿಗಜಿಣಗಿ ಅವರ ಕಣ್ಣಾಲೆಯಲ್ಲಿ ನೀರು ಜಿನುಗುತ್ತಿತ್ತು.

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ

ಅಭಿವೃದ್ಧಿ ವಿಚಾರದಲ್ಲಿ ನಾನೆಂದೂ ರಾಜಕಾರಣ ಮಾಡಿಲ್ಲವೆಂದ ಜಿಗಜಿಣಗಿ, ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲಿಗೆ ಬಿದ್ದು ಕೂಡಗಿಯಲ್ಲಿ ಎನ್‌ಟಿಪಿಸಿ ಸ್ಥಾಪಿಸುವಂತೆ ಮಾಡಿದೆ. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಕೇಂದ್ರದಿಂದ ಪ್ರತಿ ವಿಧಾನ ಸಭೆ ಕ್ಷೇತ್ರಕ್ಕೆ ಅಂದಾಜು 10 ಕೋಟಿ ರೂಪಾಯಿ ಅನುದಾನ ನೀಡಿದೆ. ಇಂದು ಗ್ಯಾರಂಟಿ ಯೋಜನೆಗಳಿಂದಾಗಿ ದಿವಾಳಿ ಎದ್ದಿರುವ ಕಾಂಗ್ರೆಸ್ ಸರ್ಕಾರದ ಶಾಸಕರು ಕೇಂದ್ರದ ಅನುದಾನದಲ್ಲಿಯೇ ಭೂಮಿ ಪೂಜೆ ನೆರವೇರಿಸುತ್ತಿರುವುದು. ಹೀಗಾಗಿ ಅಭಿವೃದ್ಧಿ ವಿಚಾರದಲ್ಲಿ ನಾನೆಂದೂ ರಾಜಕಾರಣ ಮಾಡಿಲ್ಲವೆಂದರು.

ಸಂಸದರ ಗುಣಗಾನ

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಸಂಸದ ರಮೇಶ ಜಿಗಜಿಣಗಿ ಅವರ ಪ್ರಯತ್ನದ ಫಲವಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಕೋಟ್ಯಂತರ ರೂಪಾಯಿ ಅನುದಾನ ಹರಿದು ಬಂದಿದೆ. ವಿಜಯಪುರ ರಿಂಗ್ ರೋಡ್ ಗಮನ ಸೆಳೆಯುತ್ತಿದೆ.ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸಾವಿರಾರು ಕೋಟಿ ರೂಪಾಯಿ ಅನುದಾನ ತಂದಿದ್ದಾರೆ. ಇಂಥ ಅನೇಕ ಅಭಿವೃದ್ಧಿ ಕಾರ್ಯಗಳ ಕುರಿತು ಜನರ ಮನ ಮುಟ್ಟಿಸುವ ಕೆಲಸ ಪಕ್ಷದ ಕಾರ್ಯಕರ್ತರು ಮಾಡಬೇಕೆಂದರು.

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಿಜೆಪಿ ಕೊಡುಗೆ ಅಪಾರ. ಕೆರೆಗೆ ನೀರು ತುಂಬುವ ಯೋಜನೆ ಬಿಜೆಪಿಯ ಕಾಣಿಕೆ. ಇದೀಗ ಆಲಮಟ್ಟಿ ಎತ್ತರ ಹೆಚ್ಚಿಸಲು ಮಹಾರಾಷ್ಟ್ರ ತಗಾದೆ ತೆಗೆಯುತ್ತಿದ್ದು, ಅದರ ವಿರುದ್ಧ ಒಟ್ಟಾಗಿ ಹೋರಾಟ ನಡೆಸಬೇಕಲ್ಲದೇ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ಮೀಸಲಿರಿಸಲು ಒಟ್ಟಾಗಿ ಶ್ರಮಿಸೋಣ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಜಿಗಜಿಣಗಿ ಅವರು ಅಜಾತ ಶತೃ ಎಂಬ ಕಾರಣಕ್ಕಾಗಿಯೇ ಜಿಲ್ಲೆಯಲ್ಲಿ ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳಾಗಲು ಸಾಧ್ಯವಾಗಿದೆ ಎಂದರು.

ಮುಖಂಡ ವಿಜುಗೌಡ ಪಾಟೀಲ ಮಾತನಾಡಿ, ಜಿಲ್ಲೆಯ ಇತಿಹಾಸದಲ್ಲಿಯೇ ಆಗದಂಥ ಅಭಿವೃದ್ಧಿ ಕಾರ್ಯಗಳು ಸಂಸದ ರಮೇಶ ಜಿಗಜಿಣಗಿ ಅವರ ಅವಧಿಯಲ್ಲಾಗಿವೆ. ಪ್ರತಿ ವಿಧಾನ ಸಭೆ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ನೀಡಿದ 8-10 ಕೋಟಿ ರೂಪಾಯಿ ಅನುದಾನದಲ್ಲಿ ಭೂಮಿ ಪೂಜೆ ನಡೆಯುತ್ತಿದ್ದರೂ ಯಾವೊಬ್ಬ ಶಾಸಕ ಸಹ ಮೋದಿ ಸರ್ಕಾರದ ಸಾಧನೆ ಹೇಳಿಕೊಳ್ಳುತ್ತಿಲ್ಲ. ಸಂಸದರ ಹೆಸರು ಸ್ಮರಿಸುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಆರ್.ಎಸ್. ಪಾಟೀಲ ಕುಚಬಾಳ, ಸಂಜೀವ ಐಹೊಳೆ, ಉಮೇಶ ಕೋಳಕೂರ, ಅನೀಲ ಜಮಾದಾರ, ಪ್ರಕಾಶ ಅಕ್ಕಲಕೋಟ, ಚಂದ್ರಶೇಖರ ಕವಟಗಿ, ಮಳುಗೌಡ ಪಾಟೀಲ, ರವಿ ವಗ್ಗೆ, ವಿಜಯ ಜೋಶಿ ಮತ್ತಿತರರಿದ್ದರು.

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…