

| ಮೃತ್ಯುಂಜಯ ಕಪಗಲ್ ಬೆಂಗಳೂರು
ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅನೇಕ ಉಪಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಇದರ ಭಾಗವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಹೊರಡಿಸಿರುವ ಮಾರ್ಗಸೂಚಿಯು ಸಣ್ಣ, ಅತಿಸಣ್ಣ ರೈತರಿಗೆ ವರದಾನವಾಗಿದೆ.
ಬಡ್ಡಿ ಸಹಾಯಧನದ ಬೆಳೆಸಾಲ ಯೋಜನೆಯನ್ನು ಕೃಷಿ ಸಂಬಂಧಿತ ಚಟುವಟಿಕೆ (ಸೆಕೆಂಡರಿ)ಗಳಿಗೆ ವಿಸ್ತರಿಸಲಾಗಿದ್ದು, ಪ್ರಸಕ್ತ ಹಣಕಾಸು ವರ್ಷ (2023-24)ಕ್ಕೂ ಈ ಸೌಲಭ್ಯ ಮುಂದುವರಿಸಿದೆ. ಈ ಸಂಬಂಧ ಆರ್ಬಿಐ ಮಾರ್ಗಸೂಚಿ ರವಾನಿಸಿದ್ದು, ಸಾರ್ವಜನಿಕ, ಖಾಸಗಿ ಬ್ಯಾಂಕ್ಗಳು, ಗಣಕೀಕೃತ ಪ್ಯಾಕ್ಸ್, ಶೆಡ್ಯೂಲ್ಡ್ ವಾಣಿಜ್ಯಿಕ ಬ್ಯಾಂಕ್ಗಳ ಜತೆ ಸಂಯೋಜಿತ ಹಣಕಾಸು ಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ.
ವಾಣಿಜ್ಯಿಕ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಅಲ್ಪಾವಧಿ ಬೆಳೆ ಸಾಲಕ್ಕೆ ಶೇಕಡ 8.50 ಬಡ್ಡಿ ವಿಧಿಸುತ್ತವೆ. ಆದರೆ ಬ್ಯಾಂಕ್ಗಳ ಹಂತದಲ್ಲಿಯೇ ಕೇಂದ್ರ ಸರ್ಕಾರ ಶೇ.1.50 ಬಡ್ಡಿ ಮೊತ್ತ ಭರಿಸುವ ಕಾರಣ ಶೇ.7ಕ್ಕೆ ಇಳಿಯುತ್ತದೆ. ಅಲ್ಪಾವಧಿ ಬೆಳೆ ಸಾಲ ಪಡೆದ ರೈತರು ನಿಗದಿತ ಕಾಲಮಿತಿ ಯೊಳಗೆ ಮರು ಪಾವತಿಸಿದರೆ ಶೇ.3 ಬಡ್ಡಿ ರಿಯಾಯಿತಿ ದೊರೆಯುತ್ತದೆ. ಅಂದರೆ ಶೇ.4ರ ಬಡ್ಡಿ ದರದಲ್ಲಿ ಗರಿಷ್ಠ ಮೂರು ಲಕ್ಷ ರೂ.ಗಳ ತನಕ ಬಡ್ಡಿಸಹಾಯಧನ ಸಾಲ ಸಿಗುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆದ ರೈತರು ಸಕಾಲಕ್ಕೆ ಚುಕ್ತಾ ಮಾಡಿದ ನಂತರ ರಿಯಾಯಿತಿ ನೀಡಲಾದ ಶೇ.3ರ ಬಡ್ಡಿ ಮೊತ್ತವನ್ನು ಕೇಂದ್ರ ಸರ್ಕಾರವೇ ನೀಡುತ್ತಿದ್ದು, ಒಟ್ಟಾರೆ ಶೇ.4.50 ಬಡ್ಡಿಸಹಾಯಧನದ ಮೊತ್ತವು ಬ್ಯಾಂಕ್ಗಳಿಗೆ ಕೇಂದ್ರದಿಂದ ಭರ್ತಿಯಾಗುತ್ತದೆ.
ಬಡ್ಡಿಸಹಾಯಧನ ವಿಸ್ತರಣೆ: ಸಾಗುವಳಿ ಜಮೀನು ಒಂದರಿಂದ ಐದು ಎಕರೆ ಒಳಗೆ ಹೊಂದಿರುವ ಅತಿಸಣ್ಣ, ಸಣ್ಣ ರೈತರು ಬರೀ ಕೃಷಿಯನ್ನು ನೆಚ್ಚಿಕೊಂಡರೆ ಆದಾಯ ವೃದ್ಧಿ ಸಾಧ್ಯವಿಲ್ಲವೆಂದು ಅಧ್ಯಯನಗಳು, ತಜ್ಞರ ವರದಿಗಳು ಮನಗಾಣಿಸಿವೆ. ಈ ಹಿನ್ನೆಲೆಯಲ್ಲಿ ರೈತರ ಆದಾಯದುಪ್ಪಟ್ಟು ಮಾಡಲು ಮೌಲ್ಯವರ್ಧನೆ, ಕೊಯ್ಲೋತ್ತರ ತಂತ್ರಜ್ಞಾನ, ಯಾಂತ್ರೀಕರಣ, ರೈತ ಉತ್ಪಾದಕ ಕಂಪನಿಗಳ ಸ್ಥಾಪನೆ ಇನ್ನಿತರ ಉಪಕ್ರಮಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಅಲ್ಲದೆ, ಕೃಷಿ ಸಂಬಂಧಿತ ಉಪಕಸಬುಗಳಾದ ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ಕೋಳಿ, ಕುರಿ, ಜೇನು ಸಾಕಾಣಿಕೆ ಚಟುವಟಿಕೆಗಳನ್ನು ಸೆಕೆಂಡರಿ ಕೃಷಿಗೆ ಸೇರಿಸಿದೆ. ಸೆಕೆಂಡರಿ ಕೃಷಿ ಚಟುವಟಿಕೆಗಳು ರೈತರ ಆದಾಯ ಹೆಚ್ಚಿಸುತ್ತವೆ. ಕೃಷಿಯಲ್ಲಿ ಸ್ಥಿರತೆ, ಉತ್ತಮ ಬದುಕು ಕಟ್ಟಿಕೊಳ್ಳಲು ನೆರವಾಗುತ್ತವೆ ಎಂಬ ಕಾರಣಕ್ಕೆ ಕೇಂದ್ರ ಹೆಚ್ಚಿನ ಒತ್ತು ನೀಡಿದೆ. ಇದರಿಂದಾಗಿ ಬಡ್ಡಿಸಹಾಯಧನ ಯೋಜನೆಯನ್ನು ಸೆಕೆಂಡರಿ ಕೃಷಿಗೆ ಆರ್ಬಿಐ ಎರಡು ವರ್ಷಗಳ ಹಿಂದೆಯೇ ವಿಸ್ತರಿಸಿದೆ. ಪ್ರಸಕ್ತ ಹಣಕಾಸು ವರ್ಷಕ್ಕೂ ಈ ಸೌಲಭ್ಯ ಮುಂದá-ವರಿಸಿದ್ದರ ಕುರಿತು ಮಾರ್ಗಸೂಚಿಯಲ್ಲಿ ತಿಳಿಸಿದೆ.
ಪುನರ್ ರಚಿತ ಸಾಲಕ್ಕೂ ಅನ್ವಯ: ಅಧಿಕೃತ ನಿಯಮಾವಳಿ ಪ್ರಕಾರ ನೈಸರ್ಗಿಕ ವಿಕೋಪ ಬಾಧಿತ ಪ್ರದೇಶವೆಂದು ರಾಜ್ಯ ಸರ್ಕಾರ ಘೋಷಿಸಿದ್ದರೆ, ಅರ್ಹ ರೈತರ ಬೆಳೆ ಸಾಲ ಪುನರ್ ರಚನೆಗೆ ಆರ್ಬಿಐ ಅನುಮತಿ ನೀಡಿದೆ. ಬಾಧಿತ ರೈತರ ಅಲ್ಪಾವಧಿ ಬೆಳೆ ಸಾಲ ಪುನರ್ ರಚನೆ ಹಾಗೂ ಸಾಲ ಮರು ಪಾವತಿ ಅವಧಿಯನ್ನು ಮೂರು ವರ್ಷ ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಿಸಲು ಆರ್ಬಿಐ ಅವಕಾಶ ನೀಡಿದೆ.
ಬೆಳೆ ಸಾಲ ಪುನರ್ ರಚಿಸಿದ ನಂತರ ನಿಗದಿತ ಅವಧಿಯೊಳಗೆ ಮರು ಪಾವತಿಸಿದ ರೈತರಿಗೆ ಶೇ.4ರ ರಿಯಾಯಿತಿ ಬಡ್ಡಿ ದರವೂ ಅನ್ವಯಿಸಿದೆ. ಇದರಿಂದಾಗಿ ರಾಜ್ಯ ಸರ್ಕಾರ ಘೋಷಿಸಿದ 216 ಬರ ಪೀಡಿತ ತಾಲೂಕು ರೈತರಿಗೆ ನೆರವಾಗಲಿದೆ. ರಾಜ್ಯದ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿ ವಿಶೇಷ ಸಭೆ ಇತ್ತೀಚೆಗೆ ನಡೆದು, ಆರ್ಬಿಐ ಮಾರ್ಗಸೂಚಿ ಪ್ರಕಾರ ನಿರ್ಣಯ ಕೈಗೊಂಡಿದೆ. ಬರಬಾಧಿತ ಅರ್ಹ ರೈತರ ಬೆಳೆ ಸಾಲ ಪುನರ್ ರಚಿಸಬೇಕು ಎಂದು ವಾಣಿಜ್ಯಿಕ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಗೆ ಈ ಕುರಿತು ನಿರ್ದೇಶನ ನೀಡಿ, ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿ ಉಸ್ತುವಾರಿ ಸಂಚಾಲಕ ಬಿ.ಪಾರ್ಶ್ವನಾಥ್ ಪತ್ರ ಬರೆದಿದ್ದಾರೆ.
* ಬೆಳೆ ಜತೆಗೆ ಉಪಕಸಬುಗಳಿಗೆ ಶೇ.50 ಸಾಲ ಸೌಲಭ್ಯ
* ರಾಜ್ಯದ 57 ಲಕ್ಷ ಅನ್ನದಾತರಿಗೆ ಪ್ರಯೋಜನ ಅಂದಾಜು
* ಬರ ಹಿನ್ನೆಲೆಯಲ್ಲಿ ಸಾಲ ಪುನರ್ ರಚನೆ, ಅವಧಿ ವಿಸ್ತರಣೆ
ಬಡ್ಡಿ ಸಹಾಯಧನ ಯೋಜನೆಯಿಂದ ಸೆಕೆಂಡರಿ ಕೃಷಿ ಬಲವರ್ಧಿಸುತ್ತದೆ. ಸಣ್ಣ, ಅತಿಸಣ್ಣ ರೈತರಿಗೆ ಹೆಚ್ಚುವರಿ ಆದಾಯ ಚಟುವಟಿಕೆಗಳಿಗೆ ಅನುಕೂಲ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತಾಗಲಿದೆ. | ಮನೋಹರ್ ಮಸ್ಕಿ ಸಂಸ್ಥಾಪಕ ಅಧ್ಯಕ್ಷ, ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿ
57 ಲಕ್ಷ ರೈತರಿಗೆ ಪ್ರಯೋಜನ
ಶೇ.4ರ ರಿಯಾಯಿತಿ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಳೆ ಸಾಲ ಪಡೆದ ಸಣ್ಣ, ಅತಿಸಣ್ಣ ರೈತರು ನಿಗದಿತ ಕಾಲಮಿತಿಯೊಳಗೆ ಮರು ಪಾವತಿಸಿದ್ದರೆ ಈ ಸೌಲಭ್ಯ ಪಡೆಯಬಹುದಾಗಿದೆ. ಗರಿಷ್ಠ ಮೂರು ಲಕ್ಷ ರೂ.ವರೆಗೆ ಶೇ.4ರ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಳೆ ಸಾಲ ನೀಡಲಾಗುತ್ತದೆ. ಈ ಪೈಕಿ ಶೇ.50 ಅಥವಾ ಗರಿಷ್ಠ ಎರಡು ಲಕ್ಷ ರೂ.ಗಳವರೆಗೆ ಶೇ.4ರ ಬಡ್ಡಿ ದರದಲ್ಲಿ ಸೆಕೆಂಡರಿ ಕೃಷಿ ಚಟುವಟಿಕೆಗಳಿಗೆ ಸಾಲ ಲಭಿಸುತ್ತದೆ. ರಾಜ್ಯದಲ್ಲಿರುವ 68 ಲಕ್ಷ ರೈತರ ಪೈಕಿ 57 ಲಕ್ಷ ಸಣ್ಣ, ಅತಿಸಣ್ಣ ರೈತರು ಸೇರಿದ್ದಾರೆ. ಈ ಸೌಲಭ್ಯದ ಬಗ್ಗೆ ಸರಿಯಾದ ಮಾಹಿತಿ ನೀಡಿದರೆ ಅಷ್ಟೂ ರೈತರು ಪ್ರಯೋಜನ ಪಡೆಯಲು ಸಾಧ್ಯವಿದೆ ಎಂದು ಕೃಷಿ, ಆರ್ಥಿಕ ತಜ್ಞರು ಹೇಳುತ್ತಾರೆ.