

* ಇಂದಿನಿಂದ ರೋಗ ತಡೆಗೆ ಲಸಿಕೆ ಕಾರ್ಯಕ್ರಮ
* ನಾಯಿ, ಬೆಕ್ಕು, ಬೀದಿನಾಯಿಗಳಿಗೂ ವ್ಯಾಕ್ಸಿನ್
ಗಂಗಾಧರ್ ಬೈರಾಪಟ್ಟಣ ರಾಮನಗರ
ಮನುಷ್ಯನಿಗೆ ಮಾರಣಾಂತಿಕವಾಗುವ ಹಂತಕ್ಕೂ ಕಾಡಬಹುದಾದ ರೇಬೀಸ್ ರೋಗದಿಂದ 2030ರ ವೇಳೆಗೆ ದೇಶವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಸೆ.28ರಿಂದ ಉಚಿತ ರೇಬೀಸ್ ವಿರೋಧಿ ಲಸಿಕೆ ಕಾರ್ಯಕ್ರಮ ಆರಂಭಗೊಂಡಿದೆ.
ವಿಶ್ವ ರೇಬೀಸ್ ನಿಯಂತ್ರಣ ದಿನಾಚರಣೆ ಅಂಗವಾಗಿ ರಾಮನಗರ ಜಿಲ್ಲೆ ಸೇರಿ ಎಲ್ಲೆಡೆ ಸಾಕು ಪ್ರಾಣಿಗಳಾದ ನಾಯಿ ಮತ್ತು ಬೆಕ್ಕು ಹಾಗೂ ಬೀದಿ ನಾಯಿಗಳಿಗೂ ರೇಬೀಸ್ ವಿರೋಧಿ ಚುಚ್ಚು ಮದ್ದನ್ನು ಒಂದು ತಿಂಗಳವರೆಗೂ ನೀಡುವ ಕಾರ್ಯಕ್ಕೆ ಪಶು ಪಾಲನಾ ಮತ್ತು ಪಶು ವೈದ್ಯಕಿಯ ಇಲಾಖೆ ಚಾಲನೆ ನೀಡಿದೆ.
ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಜತೆಗೆ ಅವುಗಳ ಕಡಿತವೂ ಹೆಚ್ಚಾಗುತ್ತಲೇ ಇದೆ. ಮತ್ತೊಂದೆಡೆ ಮನೆಯಲ್ಲಿ ಸಾಕಿರುವ ನಾಯಿ ಮತ್ತು ಬೆಕ್ಕುಗಳೂ ಕುಟುಂಬ ಸದಸ್ಯರ ಮೇಲೆ ದಾಳಿ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ಪ್ರಾಣಿಗಳಲ್ಲಿ ರೇಬಿಸ್ ಸೋಂಕು ಇದ್ದರೆ ಅದು ಮನುಷ್ಯರಿಗೆ ಹರಡಿ, ಸೂಕ್ತ ಚಿಕಿತ್ಸೆ ಇಲ್ಲದಿದ್ದರೆ ಇದು ಪ್ರಾಣಕ್ಕೆ ಎರವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲಿರುವ ನಾಯಿ ಮತ್ತು ಬೆಕ್ಕು ಹಾಗೂ ಬೀದಿ ನಾಯಿಗಳಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ.
ಸೆ.28ರಿಂದ ಅ.28ರವರೆಗೆ ಒಂದು ತಿಂಗಳು ರೇಬೀಸ್ ವಿರೋಧಿ ಲಸಿಕೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 120 ಪಶು ವೈದ್ಯಕಿಯ ಕೇಂದ್ರಗಳಿದ್ದು, ಇವುಗಳಲ್ಲಿ ಪ್ರತಿ ದಿನ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಜತೆಗೆ ಗ್ರಾಮಗಳಿಗೂ ತೆರಳಿ ಸ್ಥಳಿಯರ ನೆರನಿನೊಂದಿಗೆ ಬೀದಿ ನಾಯಿಗಳಿಗೆ ಲಸಿಕೆ ನೀಡುವ ಕೆಲಸ ಇಲಾಖೆ ಮಾಡಲಿದೆ.
ಸಾಮಾನ್ಯವಾಗಿ ನಮ್ಮ ನಾಯಿ ಅಥವಾ ಬೆಕ್ಕಿಗೆ ಇಂತಹ ಲಸಿಕೆ ಬೇಡ ಎನ್ನುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಆದರೆ, ಮನೆಯಲ್ಲಿ ಸಾಕಿದ ಪ್ರಾಣಿಗಳೇ ಹೆಚ್ಚು ಅಪಾಯಕಾರಿ ಆಗುವುದರಿಂದ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಿಸುವುದು ಉತ್ತಮ. ರೇಬೀಸ್ ಒಂದು ವೈರಲ್ ರೋಗವಾಗಿದ್ದು, ಬಾಧಿತ ಪ್ರಾಣಿ ಕಚ್ಚಿದರೆ ಇದರ ಎಂಜಲು ಮನುಷ್ಯರ ದೇಹಕ್ಕೆ ಸೇರಿದರೆ ಖಂಡಿತವಾಗಿ ಪ್ರಾಣ ಬಲಿತೆಗೆದುಕೊಳ್ಳುವ ಹಂತಕ್ಕೆ ತಲುಪುತ್ತದೆ. ಇದಕ್ಕೆ ಪ್ರಾಣಿಗಳಿಗೆ ಲಸಿಕೆ ಹಾಕಿಸುವುದು ಮುಂಜಾಗ್ರತಾ ಕ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸರ್ಕಾರದ ಪ್ರಯತ್ನಕ್ಕೆ ಕೈ ಜೋಡಿಸಬೇಕಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯಂತೆ ಪ್ರತಿ ವರ್ಷ ರೇಬೀಸ್ ರೋಗಕ್ಕೆ ಸಾವಿರಾರು ಮಂದಿ ಬಲಿ ಆಗುತ್ತಿದ್ದಾರೆ. ಇದಕ್ಕೆ ಕಾರಣ ರೇಬೀಸ್ ಬಗೆಗಿನ ಜಾಗೃತಿ ಕೊರತೆ. ಪ್ರಾಣಿಗಳಿಗೆ ಲಸಿಕೆ ಹಾಕಿಸದೇ ಇರುವುದು. ಪ್ರಾಣಿಗಳು ಕಚ್ಚಿದ ವೇಳೆ ಸೂಕ್ತ ಚಿಕಿತ್ಸೆ ಪಡೆಯದೆ ಇರುವುದು. ಅದರಲ್ಲೂ ರೇಬೀಸ್ ರೋಗಕ್ಕೆ ತುತ್ತಾಗಿ ಸಾಯುವವರಲ್ಲಿ 5&14 ವರ್ಷದೊಳಗಿನ ಮಕ್ಕಳೇ ಹೆಚ್ಚಿದ್ದು, ಒಟ್ಟಾರೆ ಸಾವಿನ ಸಂಖ್ಯೆಯಲ್ಲಿ ಶೇ.40 ಪ್ರಮಾಣ ಹೊಂದಿದೆ ಎಂದು ಎಚ್ಚರಿಸಿದೆ.
ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ರೇಬೀಸ್ ಪ್ರಕರಣ ಕಂಡು ಬಂದಿಲ್ಲ. ಆದರೆ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 2023ರಲ್ಲಿ 8019 ಮಂದಿಗೆ ನಾಯಿ ಕಚ್ಚಿದ ಪ್ರಕರಣಗಳು ಕಂಡು ಬಂದಿದ್ದರೆ, 2024ರಲ್ಲಿ ಆಗಸ್ಟ್ ಅಂತ್ಯದವರೆಗೆ 6180 ಪ್ರಕರಣಗಳು ದಾಖಲಾಗಿವೆ.
ಇತ್ತೀಚೆಗೆ ಚಿರತೆಗಳಲ್ಲೂ ರೇಬೀಸ್ ರೋಗ ಲಕ್ಷಣಗಳು ಕಂಡು ಬಂದ ಉದಾಹರಣೆ ಇದೆ. ಇದಕ್ಕೆ ಪ್ರಮುಖ ಕಾರಣ ಜನ ವಸತಿ ಪ್ರದೇಶಕ್ಕೆ ನುಗ್ಗುವ ಚಿರತೆಗಳು, ನಾಯಿಗಳನ್ನು ತಿನ್ನುತ್ತಿವೆ. ಆದರೆ ರೇಬೀಸ್ ರೋಗ ಇರುವ ನಾಯಿಗಳನ್ನು ತಿಂದಾಗ ರೋಗ ಚಿರತೆಗಳಲ್ಲಿಯೂ ಕಾಣಿಸಿಕೊಂಡಿವೆ. ಇಂತಹ ಚಿರತೆಗಳು ಕಾಡಿನಲ್ಲಿಯೂ ಇತರ ಪ್ರಾಣಿಗಳಿಗೂ ರೋಗ ಹರಡಿಸುವ ಸಾಧ್ಯತೆ ಇರುವ ಜತೆಗೆ ಜನರಿಗೂ ಮಾರಣಾಂತಿಕವಾಗಬಹುದು.
ಇಂದಿನಿಂದ ಒಂದು ತಿಂಗಳ ಕಾಲ ನಾಯಿ, ಬೆಕ್ಕಿಗೆ ಉಚಿತವಾಗಿ ರೇಬೀಸ್ ವಿರೋಧಿ ಲಸಿಕೆಯನ್ನು ಪಶು ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ಚನ್ನಪಟ್ಟಣ ಸೇರಿ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಲಸಿಕೆ ನೀಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. > ಡಾ.ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕರು, ಪಶುವೈದ್ಯಕಿಯ ಇಲಾಖೆ, ಚನ್ನಪಟ್ಟಣನಾಯಿ ಕಡಿತದ ವಿವರ ತಾಲೂಕು 2023 2004 (ಆಗಸ್ಟ್ವರೆಗೆ)
ಚನ್ನಪಟ್ಟಣ 2292 1915
ಕನಕಪುರ 2262 1632
ಮಾಗಡಿ 1985 1396
ರಾಮನಗರ 1480 1237