

ಹನೂರು: ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣ ಮಾಡುವುದರ ಮೂಲಕ ಸದೃಢ ದೇಶವನ್ನು ಕಟ್ಟಲು ಯುವಪೀಳಿಗೆ ಮುಂದಾಗಬೇಕು ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದೇಗುಲದ ಮುಂಭಾಗದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗುರುವಾರ ಆಯೋಜಿಸಿದ್ದ ಸ್ವಾತಂತ್ರೊೃೀತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದ ಸ್ವಾತಂತ್ರೃಕ್ಕಾಗಿ ಮಹಾತ್ಮ ಗಾಂಧೀಜಿ ಸೇರಿದಂತೆ ಹಲವು ಮಹಾನ್ ನಾಯಕರು ತಮ್ಮ ಜೀವದ ಹಂಗು ತೊರೆದು ಹೋರಾಟ ನಡೆಸಿದ್ದಾರೆ. ಆದ್ದರಿಂದ ಇವರ ಆದರ್ಶ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಗಾಂಧೀಜಿ ಅವರು ಉತ್ತಮ ಸಮಾಜದ ಕನಸು ಕಂಡಿದ್ದು, ಅಹಿಂಸಾ ಮಾರ್ಗವನ್ನು ಅನುಸರಿಸಿದ್ದರು. ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿದ್ದರು. ಅವರ ಕನಸು ನನಸಾಗಬೇಕಾದರೆ ಪ್ರತಿಯೊಬ್ಬರೂ ಪರಿಸರ ರಕ್ಷಿಸುವುದರ ಜತೆಗ ಸ್ವಚ್ಛತೆಯನ್ನು ಕಾಪಾಡಬೇಕಿದೆ. ಭ್ರಷ್ಟಾಚಾರಮುಕ್ತ ಸಮಾಜಕ್ಕೆ ಪಣತೊಡಬೇಕು. ಇದರಿಂದ ಸದೃಢ ರಾಷ್ಟ್ರ ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.
ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಮಾತನಾಡಿ, ಭಾರತ ಸ್ವಾತಂತ್ರೃ ಹೋರಾಟಗಾರರು, ದಾರ್ಶನಿಕರು, ಸಮಾಜ ಸುಧಾರಕರನ್ನು ಒಳಗೊಂಡಿರುವ ನೆಲೆಬೀಡು. ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ದೇಶವು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವುದರ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಯುವಜನತೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಇದರಿಂದ ಸದೃಢ ಭಾರತ ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಸಿಬ್ಬಂದಿ, ಭಕ್ತರು ಇದ್ದರು.
ಸಾಲೂರು ಮಠದಲ್ಲೂ ಆಚರಣೆ: ಇದಕ್ಕೂ ಮುನ್ನ ಸಾಲೂರು ಬೃಹನ್ಮಠದ ಆವರಣದಲ್ಲಿ ಶ್ರೀಗಳು ಧ್ವಜಾರೋಹಣ ನೆರವೇರಿಸಿದರು. ಸಾಲೂರು ಮಠದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ, ಭಕ್ತರಿಗೆ ಆಶೀರ್ವಚನ ನೀಡಿದರು. ಗುಂಡೇಗಾಲ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಪ್ರಾಂಶುಪಾಲ ಪ್ರಭುಸ್ವಾಮಿ, ಮುಖ್ಯಶಿಕ್ಷಕರಾದ ಎಚ್.ಎನ್.ಶಿವಕುಮಾರ್, ಮಾಲಮಣಿ ಇದ್ದರು.