

ಶಿರಹಟ್ಟಿ: ಹೊಲಗಳ ಪಕ್ಕದಲ್ಲಿ ಅಡ್ಡಲಾಗಿ ಚೆಕ್‌ಡ್ಯಾಂ ಮತ್ತು ಬ್ಯಾರೇಜ್ ನಿರ್ಮಾಣ ಮಾಡಿದ್ದರಿಂದ ಹೊಲಗಳಿಗೆ ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮಸ್ಯೆ ನಿವಾರಣೆಗೆ ಅನೇಕ ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶಗೊಂಡ ಅಂಕಲಿ ಗ್ರಾಮದ ರೈತರು ಸೋಮವಾರ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಅಂಕಲಿ ಗ್ರಾಮದ 50ಕ್ಕೂ ಹೆಚ್ಚಿನ ಕುಟುಂಬದ ರೈತರು ತಮ್ಮ ಜಮೀನುಗಳಿಗೆ ತೆರಳಲು ಸೂಕ್ತ ರಸ್ತೆ ಇಲ್ಲದೇ ಪರದಾಡುವಂತಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವಿಕ ಸ್ಥಿತಿ ಅರಿತು ಹೊಲಗಳಿಗೆ ಸಂಚರಿಸಲು ವ್ಯವಸ್ಥೆ ಮಾಡಿಕೊಡಲು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಅಧಿಕಾರಿಗಳ ಉದಾಸೀನ ಧೋರಣೆ ಖಂಡಿಸಿ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಲು ತೀರ್ಮಾನಿಸಿದ್ದರು. ಆದರೆ, ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದರಿಂದ ಧರಣಿ ಹಿಂಪಡೆಯಲಾಗಿದೆ ಎಂದರು.
ರೈತರ ಸಮಸ್ಯೆ ಆಲಿಸಿದ ತಹಸೀಲ್ದಾರ್ ಅನೀಲ ಬಡಿಗೇರ ಮಾತನಾಡಿ, ಈಗಾಗಲೇ ಅಂಕಲಿ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವಿಕ ಸ್ಥಿತಿ ತಿಳಿಯಲಾಗಿದೆ. ರೈತರಲ್ಲಿನ ಭಿನ್ನಾಭಿಪ್ರಾಯದಿಂದ ಸಮಸ್ಯೆ ಉಂಟಾಗಿದೆ. ಆದಾಗ್ಯೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ವಿಚಾರ ವಿಮರ್ಶೆ ನಡೆಸಿ ರೈತರ ಸಹಕಾರ ಕೋರುವ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಮಹಾಂತೇಶ ದಶಮನಿ, ಮಲ್ಲನಗೌಡ ಪಾಟೀಲ, ಆನಂದ ಮಾಳೇಕೊಪ್ಪ, ಮಂಜು ಮಾಗಡಿ, ಹನುಮಂತ ಕಮತ, ಗೋವಿಂದಗೌಡ ಪಾಟೀಲ, ಬಸನಗೌಡ ಪಾಟೀಲ, ರೈತ ಮಹಿಳೆಯರಿದ್ದರು.