

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಅವರ ನಿವಾಸಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.
ಪದ್ಮನಾಭನಗರದಲ್ಲಿರುವ ದೇವೇಗೌಡ ಅವರ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಯಡಿಯೂರಪ್ಪ ಕಾಲಿಗೆ ಬೀಳಲು ಮುಂದಾದರು. ಈ ವೇಳೆ ದೇವೇಗೌಡರು ಕೈ ಹಿಡಿದು ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಿದರು. ನಂತರ ಆರೋಗ್ಯ ವಿಚಾರಿಸಿ ಯಡಿಯೂರಪ್ಪ ಆಶೀರ್ವಾದ ಪಡೆದುಕೊಂಡರು.
"ದೇವೇಗೌಡರಿಗೆ ಮಂಡಿ ನೋವಿತ್ತು. ಹೀಗಾಗಿ ಅವರ ನಿವಾಸಕ್ಕೆ ಬಂದು ಆರೋಗ್ಯ ವಿಚಾರಿಸಿದ್ದೇನೆ. ಅವರು ಕ್ಷೇಮವಾಗಿದ್ದಾರೆ. ಹಳೆಯ ದಿನಗಳನ್ನು ಮರೆತಿಲ್ಲ. ಮೈಸೂರಿಗೆ ಪಾದಯಾತ್ರೆ ಮಾಡಿದನ್ನು ಸ್ಮರಿಸಿಕೊಂಡರು. ದೇವೇಗೌಡರ ನೆನಪಿನ ಶಕ್ತಿ ಅದ್ಭುತವಾದದ್ದು. ನಮ್ಮಿಬ್ಬರ ಹಳೆಯ ದಿನಗಳನ್ನು ನೆನಪಿಸಿಕೊಂಡರು" ಎಂದು ಸುದ್ದಿಗಾರರ ಪ್ರಶ್ನೆಗೆ ಯಡಿಯೂರಪ್ಪ ಪ್ರತಿಕ್ರಿಯಿಸಿದರು. ಈ ವೇಳೆ ಶಾಸಕರಾದ ಎಂ. ಕೃಷ್ಣಪ್ಪ ಮತ್ತು ಎಸ್. ಆರ್. ವಿಶ್ವನಾಥ್ ಇದ್ದರು.
ಸಿದ್ಧರಾಮಯ್ಯ ಭೇಟಿ
ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಸೋಮವಾರ (ಸೆ.19) ತಮ್ಮ ಆಪ್ತರ ಜತೆಗೆ ಪದ್ಮನಾಭಗರದಲ್ಲಿರುವ ನಿವಾಸಕ್ಕೆ ತೆರಳಿ ದೇವೇಗೌಡರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದರು. (ದಿಗ್ವಿಜಯ ನ್ಯೂಸ್)