

ದಾವಣಗೆರೆ: ಮಳೆ ನಿಂತ ಮೇಲೆ ಹನಿಯೊಂದು ಮೂಡಿದೆ... ಎಂಬಾಂತಾಗಿದೆ ರಾಜ್ಯದಲ್ಲಿ ಸಿಎಂ ಗಾದಿ ಪ್ರಸ್ತಾಪ.
ಇನ್ನೂ ಎರಡೂವರೆ ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರೇ ಮುಂದುವರಿಯುತ್ತಾರೆ, ರಾಜ್ಯ ಬಿಜೆಪಿಯಲ್ಲಿ ಬಿಎಸ್ವೈ ಅವರೇ ಸುಪ್ರೀಂ ಎಂದು ಇತ್ತೀಚಿಗೆ ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆ ಬಳಿಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಘೋಷಿಸಿದ್ದರು.
ಇದೀಗ ಕೆ.ಎಸ್. ಈಶ್ವರಪ್ಪ ಅವರನ್ನು ಸಿಎಂ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ. ದಾವಣಗೆರೆಯಲ್ಲಿ ಬುಧವಾರ ನಡೆದ ಕುರುಬ ಸಮುದಾಯದ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಹರಿಹರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್. ರಾಮಪ್ಪ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕುರುಬ ಸಮುದಾಯದ ಐವರು ಶಾಸಕರು ಕಾರಣ. ಕುರುಬ ಜನಾಂಗದ ಐವರು ಯಡಿಯೂರಪ್ಪಗೆ ಬೆಂಬಲ ನೀಡಿದ್ರು. ಹಾಗಾಗಿ ಈಶ್ವರಪ್ಪ ಅವರನ್ನೇ ಸಿಎಂ ಮಾಡಬೇಕು. ನಾವೆಲ್ಲ ಈಶ್ವರಪ್ಪಗೆ ಬೆಂಬಲ ಕೊಡುತ್ತೇವೆ ಎನ್ನುವ ಮೂಲಕ ಸಿಎಂ ಗಾದಿ ವಿಚಾರವನ್ನ ಮತ್ತೆ ಮುನ್ನಲೆಗೆ ತಂದಿದ್ದಾರೆ.