

ಬೆಂಗಳೂರು : ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಿ ವಂಚಿಸಿದ ಐಎಂಎನಂತಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆ ಕರ್ನಾಟಕ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ನಿಯಮಗಳು- 2020ಕ್ಕೆ ಅನುಮೋದನೆ ನೀಡಿದೆ.
2019ರಲ್ಲಿ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ಈ ಬಗ್ಗೆ ನಿಯಮ ರೂಪಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ನಿಯಮಗಳನ್ನು ರಚಿಸಿದೆ. ಈ ಕಾಯ್ದೆಯನ್ವಯ, ಸ್ವಸಹಾಯ ಗುಂಪುಗಳ ಖಾತೆಗಳಲ್ಲಿ ಒಂದು ಬಾರಿಗೆ ಗರಿಷ್ಠ 10 ಲಕ್ಷ ರೂ.ವರೆಗೆ ಜಮೆ ಮಾಡಲು ಅನುಮತಿ ನೀಡಬಹುದಾಗಿದೆ.
ಸಕ್ಷಮ ಪ್ರಾಧಿಕಾರ : ಅನಿಯಂತ್ರಿತ ಠೇವಣಿ ವಿಚಾರದಲ್ಲಿ ಕಾರ್ಯದರ್ಶಿ ದರ್ಜೆಗೆ ಕಡಿಮೆ ಇಲ್ಲದ ಒಬ್ಬ ಅಧಿಕಾರಿ ಅಥವಾ ಅದಕ್ಕಿಂತ ಉನ್ನತ ಅಧಿಕಾರಿಯನ್ನು ಸಕ್ಷಮ ಪ್ರಾಧಿಕಾರಿಯಾಗಿ ನೇಮಿಸಬಹುದಾಗಿದೆ. ಕಾನೂನು ಉಲ್ಲಂಘನೆಗೆ ಕೇಂದ್ರ ಸರ್ಕಾರ ನಿಗದಿಪಡಿಸುವ ಶಿಕ್ಷೆಗಳು ಅನ್ವಯಗೊಳ್ಳಲಿವೆ.
ಅಭಿಪ್ರಾಯ ಸಂಗ್ರಹ : ಈ ಕರಡು ಸಿದ್ಧಪಡಿಸುವ ಮುನ್ನ ಆರ್ಥಿಕ ಇಲಾಖೆ ಕಾನೂನು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ನಬಾರ್ಡ್ ಸೇರಿದಂತೆ ವಿವಿಧ ಇಲಾಖೆಗಳಿಂದ ಅಭಿಪ್ರಾಯ ಸಂಗ್ರಹಿಸಿತ್ತು. ಆ ಎಲ್ಲ ಸಲಹೆಗಳನ್ನು ಕ್ರೋಡೀಕರಿಸಿ ಕರಡಿನಲ್ಲಿ ಅಂತರ್ಗತ ಮಾಡಲಾಗಿದೆ. ಈ ಕರಡು ನಿಯಮಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಪಡೆಯಲಾಗುತ್ತದೆ.
ಕೇಂದ್ರದ ಕಾಯ್ದೆ ಏನು? ಹಣಕಾಸು ಸಂಸ್ಥೆಗಳು ಮತ್ತು ಚಿಟ್ಫಂಡ್ಗಳಿಂದ ಗ್ರಾಹಕರಿಗೆ ಆಗುವ ವಂಚನೆ ತಡೆಯಲು ಕೇಂದ್ರ ಸರ್ಕಾರ 2019ರ ಫೆಬ್ರವರಿಯಲ್ಲೇ ಅನಿಯಂತ್ರಿತ ಠೇವಣಿ ನಿಷೇಧಕ್ಕೆ ಸುಗ್ರೀವಾಜ್ಞೆ ಜಾರಿ ಮಾಡಿತು. ಅದೇ ವರ್ಷ ಜುಲೈನಲ್ಲಿ ಈ ಕುರಿತ ಮಸೂದೆಗೆ ಸಂಸತ್ ಅನಮೋದನೆ ನೀಡಿತು. ಹೆಚ್ಚಿನ ಬಡ್ಡಿದರದ ಆಮಿಷ ಒಡ್ಡಿ ಜನರಿಂದ ಠೇವಣಿ ಸಂಗ್ರಹಿಸಿ ನಂತರ ವಂಚಿಸುವ ಪ್ರಕರಣಗಳು ಹೆಚ್ಚಾದ ಕಾರಣ ಇದನ್ನು ತಡೆಯಲು ಈ ಕಾಯ್ದೆ ರಚಿಸಲಾಯಿತು. * ಆರ್ಬಿಐ, ಸೆಬಿ, ಕಾರ್ಪೆರೇಟ್ ವ್ಯವಹಾರದ ಸಚಿವಾಲಯ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಲ್ಲಿ ನೋಂದಣಿಯಾಗದ ಸಂಸ್ಥೆಗಳು ಸಂಗ್ರಹಿಸುವ ಠೇವಣಿ ಕಾನೂನುಬಾಹಿರ * ಅನಿಯಂತ್ರಿತವಾಗಿ ಠೇವಣಿ ಸಂಗ್ರಹಿಸುವುದು ಅಥವಾ ಈ ಉದ್ದೇಶದ ಜಾಹೀರಾತು ನೀಡುವುದು ನಿಷಿದ್ಧ * ಅನಿಯಂತ್ರಿತ ಠೇವಣಿ ಸಂಗ್ರಹಿಸಿದ್ದರೆ 2ರಿಂದ 7 ವರ್ಷ ಸಜೆ ಮತ್ತು -ಠಿ; 10 ಲಕ್ಷದವರೆಗೆ ದಂಡ. ಠೇವಣಿ ಮರುಪಾವತಿ ಮಾಡದಿದ್ದರೆ 3ರಿಂದ 10 ವರ್ಷ ಜೈಲು ಹಾಗೂ 5 ಲಕ್ಷ ರೂಪಾಯಿಯಿಂದ ವಂಚನೆಯಾದ ಮೊತ್ತದ ದುಪ್ಪಟ್ಟು ದಂಡ. ಅಪರಾಧ ಮರುಕಳಿಸಿದರೆ 5ರಿಂದ 10 ವರ್ಷ ಜೈಲು ಹಾಗೂ 10 ಲಕ್ಷ ರೂಪಾಯಿಯಿಂದ 5 ಕೋಟಿ ರೂಪಾಯಿಯವರೆಗೂ ದಂಡ. * ವಂಚನೆಗೈದ ಸಂಸ್ಥೆಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಸಕ್ಷಮ ಪ್ರಾಧಿಕಾರಕ್ಕೆ (ಕೇಂದ್ರ ಮತ್ತು ರಾಜ್ಯಗಳ ಕಾರ್ಯದರ್ಶಿ ಹುದ್ದೆಯ ಅಧಿಕಾರಿ) ನೀಡುವುದು ಮತ್ತು ನಿಗದಿತ ಸಮಯದಲ್ಲಿ ಪ್ರಕರಣ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪನೆ.