

ಮೈಸೂರು; 10 ವರ್ಷದ ಅಪ್ರಾಪ್ತ ಬಾಲಕಿಯನ್ನ ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಅರಮನೆ ಮುಂಭಾಗದ ದೊಡ್ಡ ಕೆರೆ ಮೈದಾನದ ಬಳಿ ಬಾಲಕಿಯನ್ನ ಹತ್ಯೆ ಮಾಡಲಾಗಿದೆ. ನಜರ್ ಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದೇಹದ ಮೇಲೆ ಬಟ್ಟೆಯ ಇಲ್ಲದ ರೀತಿಯಲ್ಲಿ ಶವ ಪತ್ತೆಯಾಗಿದೆ. ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆಯನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ.
ಮೈಸೂರು ದಸರಾ ಹಿನ್ನೆಲೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಕುಟುಂಬಸ್ಥರು ಕಲಬುರಗಿಯಿಂದ ಮೈಸೂರಿಗೆ ಬಂದಿದ್ದರು. ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗ ಮೈಸೂರಿನ ಅರಮನೆ ಮುಂಭಾಗದ ದೊಡ್ಡ ಕೆರೆ ಮೈದಾನದ ಬಳಿ ತಂಗಿದ್ದರು. ಈ ಮಧ್ಯೆ ನಗರದ ಚಾಮುಂಡಿ ಬೆಟ್ಟ, ವಸ್ತು ಪ್ರದರ್ಶನ, ಬನ್ನಿ ಮಂಟಪ, ದೇವರಾಜ ಮಾರುಕಟ್ಟೆ ಸೇರಿ ಹಲವು ಸ್ಥಳಗಳಲ್ಲಿ ಇವರು ವ್ಯಾಪಾರ ಮಾಡುತ್ತಿದ್ದರು.
ಎರಡು ದಿನಗಳ ಹಿಂದೆ ಇದೇ ಜಾಗದ ಮತ್ತೊಂದು ಬದಿಯಲ್ಲಿ ಗಿಲ್ಗಿ ವೆಂಕಟೇಶ್ ಎಂಬ ವ್ಯಕ್ತಿಯ ಹತ್ಯೆ ಮಾಡಲಾಗಿತ್ತು. ಇದೀಗ ಬಾಲಕಿಯನ್ನ ಅಮಾನುಷವಾಗಿ ಹತ್ಯೆ ಮಾಡಲಾಗಿದ್ದು, ಸದ್ಯ ಪೊಲೀಸರು ಕುಟುಂಬಗಳ ವಿಚಾರಣೆ ನಡೆಸುತ್ತಿದ್ದಾರೆ.
ಬುಧವಾರ ರಾತ್ರಿ ಸುಮಾರು 12 ಗಂಟೆವರೆಗೆ ವ್ಯಾಪಾರ ಮಾಡಿಕೊಂಡು ಬಂದಿದ್ದ ಒಂದೇ ಕುಟುಂಬದ 8 ಜನ ಒಟ್ಟಿಗೆ ಮಲಗಿದ್ದರು. ಮುಂಜಾನೆ 4 ಗಂಟೆಯಲ್ಲಿ ಮಳೆ ಬಂದಾಗ ಎಚ್ಚರವಾಗಿದ್ದು, ಆಗ ಪಕ್ಕದಲ್ಲಿ ಮಗು ಇಲ್ಲದ್ದನ್ನು ಗಮನಿಸಿದ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಮೊದಲು ನಜರ್ಬಾದ್ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿ ನಂತರ ಹುಟುಕಾಟ ನಡೆಸಿದ್ದು, ಬೆಳಗ್ಗೆ 6.30 ರ ಸುಮಾರಿಗೆ ಜೋಪಡಿ ಪಕ್ಕದ ಗುಂಡಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಶವವನ್ನ ನೋಡಿದ ಕುಟುಂಬಸ್ಥರು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.