ಜಿಬಿಎ ಹೆಸರನ್ನು ಬೃಹತ್ ಬೆಂಗಳೂರು ಪ್ರಾಧಿಕಾರ ಎಂದು ಬದಲಾಯಿಸಿ - ಸರ್ಕಾರಕ್ಕೆ ಬಿಳಿಮಲೆ ಆಗ್ರಹ

Bilimale
Published on

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೆಸರಿಗೆ ಬದಲಾಗಿ ಬೃಹತ್ ಬೆಂಗಳೂರು ಪ್ರಾಧಿಕಾರ  ಎಂದು ಬದಲಾಯಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸರ್ಕಾರನ್ನು ಆಗ್ರಹಿಸಿದ್ದಾರೆ.

ಜಿಬಿಎ ಎಂಬ ಹೆಸರಿಗೆ ಪರ್ಯಾಯ ಕನ್ನಡ ಪದಗಳನ್ನು ಸೂಚಿಸಲು ಸಾರ್ವಜನಿಕರಿಗೆ ಕರೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡೆ ಪ್ರಜಾಸತ್ತಾತ್ಮಕವಾದದ್ದು ಎಂದು ಸ್ವಾಗತಿಸಿರುವ ಬಿಳಿಮಲೆ ಅವರು, ಕನ್ನಡದ ಅಸ್ಮಿತೆಯನ್ನು ಸಮರ್ಥವಾಗಿ ಪ್ರತಿಬಿಂಬಿಸಲು ಬೃಹತ್ ಬೆಂಗಳೂರು ಪ್ರಾಧಿಕಾರ ಎಂದು ಕರೆಯುವುದು ಸೂಕ್ತ ಎಂದು ಡಿ.ಕೆ.ಶಿ ಅವರಿಗೆ ಪತ್ರ ಬರೆದು ಸೂಚಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎನ್ನುವ ಪದವನ್ನು ಕನ್ನಡೀಕರಿಸಲು ಹಲವಾರು ಸಲಹೆಗಳು ಸಾರ್ವಜನಿಕರಿಂದ ಸ್ವೀಕೃತವಾಗಿದ್ದು, ಒಟ್ಟಾರೆಯಾಗಿ ಅದನ್ನು ಬೃಹತ್ ಬೆಂಗಳೂರು ಪ್ರಾಧಿಕಾರ ಎಂದು ಕರೆಯುವುದೇ ಸಮಂಜಸ ಎಂಬ ಅಭಿಪ್ರಾಯ ಮೂಡಿದೆ. ಪ್ರಾಧಿಕಾರದ ನಿಲುವು ಸಹ ಬೃಹತ್ ಬೆಂಗಳೂರು ಪ್ರಾಧಿಕಾರ ಎಂದೇ ಆಗಿದ್ದು, ಈ ರೀತಿಯಲ್ಲಿ ಹೆಸರನ್ನು ಬದಲಾಯಿಸಿದಲ್ಲಿ ಸರ್ಕಾರವು ಕನ್ನಡದ ಅಸ್ಮಿತೆಯನ್ನು ಗೌರವಿಸಿದಂತಾಗುತ್ತದೆ. ಪ್ರಾಧಿಕಾರವು ಮಾನಸಿಕವಾಗಿ ಎಲ್ಲ ಕನ್ನಡಿಗರಿಗೆ ಆಪ್ತವಾಗುವ ಅವಕಾಶವನ್ನು ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಆದೇಶ ಹೊರಡಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು ಒತ್ತಾಯಿಸಿದ್ದಾರೆ.

ಮಹಾಪೌರರು ಮತ್ತು ಉಪ ಮಹಾಪೌರರು ಕನ್ನಡದವರೇ ಆಗಿರಲಿ: ಮುಂದಿನ ದಿನಗಳಲ್ಲಿ ಪ್ರಾಧಿಕಾರದ ವ್ಯಾಪ್ತಿಯ ಪಾಲಿಕೆಗಳಲ್ಲಿ ಚುನಾವಣೆಗಳು ನಡೆಯಲಿದ್ದು, ಆಯ್ಕೆಯಾಗುವ ಪಾಲಿಕೆಯ ಮಹಾಪೌರರುಗಳು ಕಡ್ಡಾಯವಾಗಿ ಕನ್ನಡದವರೇ ಆಗಿರುವಂತೆ ಸರ್ಕಾರವು ನೋಡಿಕೊಳ್ಳಬೇಕಿದೆ. ಕನ್ನಡ ಭಾಷೆ ರಾಜಧಾನಿ ಬೆಂಗಳೂರು ನಗರದಲ್ಲಿ ತನ್ನ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಬೇಕಾದಲ್ಲಿ ಸರ್ಕಾರದ ಈ ನಡೆ ಅತ್ಯಾವಶ್ಯಕವಾಗಿದೆ. ಸರ್ಕಾರವು ಈಗಿನಿಂದಲೇ ಈ ಬಗ್ಗೆ ಗಮನ ಹರಿಸುವುದು ಒಳಿತು ಎಂದು ಅವರು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net