ದುರುಗುಟ್ಟಿ ನೋಡಿದ್ದಕ್ಕೇ ಸಹೋದರರ ಮಧ್ಯೆ ಜಗಳ, ಚೂರಿ ಇರಿತಕ್ಕೆ ಸಾವಿಗೀಡಾದ ತಮ್ಮ..

Balu
ಅಣ್ಣನಿಂದ ಕೊಲೆಯಾದ ತಮ್ಮ ಬಾಲು
Published on

ಬೆಂಗಳೂರು: ಗುರಾಯಿಸಿದ ಎಂಬ ಕಾರಣಕ್ಕೆ ಚಾಕುವಿನಿಂದ ಇರಿದು ಸ್ವಂತ ತಮ್ಮನನ್ನೇ ಅಣ್ಣ ಬರ್ಬರವಾಗಿ ಕೊಲೆಗೈದಿರುವ ದಾರುಣ ಘಟನೆ ಕೆ.ಆರ್.​ಪುರ ಪೊಲೀಸ್​ ಠಾಣಾ ವ್ಯಾಪ್ತಿಯ ಪ್ರಿಯಾಂಕನಗರದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಿಯಾಂಕನಗರದ ನಿವಾಸಿ ಬಾಲು(22) ಕೊಲೆಯಾದ ದುರ್ದೈವಿ. ರಾಮಕೃಷ್ಣ (25) ಬಂಧಿತ ಆರೋಪಿ. ಇವರು ತಮಿಳುನಾಡಿನ ಮಧುರೈ ಮೂಲದವರು. ಹಲವು ವರ್ಷಗಳಿಂದ ಕೆ.ಆರ್​ ಪುರದ ಪ್ರಿಯಾಂಕನಗರದಲ್ಲಿರುವ ಕೊಳೆಗೇರಿಯಲ್ಲಿ ತಂದೆ-ತಾಯಿ ಜತೆಗೆ ವಾಸವಾಗಿದ್ದಾರೆ. ಪೆರುಮಾಳ್​ ಅವರಿಗೆ ಒಟ್ಟು ನಾಲ್ವರು ಮಕ್ಕಳಿದ್ದು, ರಾಮಕೃಷ್ಣ ಎರಡನೆ ಮಗನಾಗಿದ್ದರೆ ಬಾಲು ನಾಲ್ಕನೆಯ ಮಗನಾಗಿದ್ದ, ಇನ್ನಿಬ್ಬರು ಹೆಣ್ಣು ಮಕ್ಕಳು.

ಬಾಲು ಪೇಂಟಿಂಗ್ ಕೆಲಸ ಮಾಡುತ್ತಿದ್ದ, ಆರೋಪಿ ರಾಮಕೃಷ್ಣ ಕಂಬಿ ಕಟ್ಟುವ ಕೆಲಸ (ಬಾರ್​ ಬೆಂಡಿಂಗ್​) ಮಾಡಿಕೊಂಡಿದ್ದ, ಕ್ಷುಲ್ಲಕ ಕಾರಣಕ್ಕೆ ಇಬ್ಬರು ಆಗಾಗ್ಗೆ ಜಗಳ ಮಾಡಿಕೊಳ್ಳುತ್ತಿದ್ದರು. ಶನಿವಾರ ಬೆಳಗ್ಗೆ ಬಾಲು ತೊಳೆಯುವ ಸಲುವಾಗಿ ಬಟ್ಟೆ ನೆನೆಸಿಟ್ಟು ಬಾತ್​ರೂಮ್​ನಿಂದ ಹೊರಬಂದಿದ್ದಾನೆ. ಹೊರ ಬರುವ ವೇಳೆಯಲ್ಲಿ ಎದುರಿಗೆ ಬಂದ ಅಣ್ಣ ರಾಮಕೃಷ್ಣನನ್ನು ತಮ್ಮ ಗುರಾಯಿಸಿ ನೋಡಿದ್ದಾನೆ. ಇದರಿಂದ ಕುಪಿತಗೊಂಡ ಆರೋಪಿ ಕ್ಯಾತೆ ತೆಗೆದು ತಮ್ಮನ ಜತೆ ಜಗಳ ಶುರು ಮಾಡಿದ್ದಾನೆ, ಏಕೆ ಗುರಾಯಿಸುತ್ತೀಯಾ ಎಂದು ಪ್ರಶ್ನಿಸಿ ಇಬ್ಬರ ನಡುವಿನ ಮಾತು ಜಗಳಕ್ಕೆ ತಿರುಗಿ ಅತಿರೇಕಕ್ಕೆ ಹೋದಾಗ ತಮ್ಮ ಅಣ್ಣನಿಗೆ ಅವಾಚ್ಯಶಬ್ದಗಳಿಂದ ನಿಂದಿಸಿದ್ದಾನೆ.

ಇದರಿಂದ ಕುಪಿತನಾದ ಅಣ್ಣ ರಾಮಕೃಷ್ಣ ಅಡುಗೆ ಮನೆಯಿಂದ ಚಾಕು ತಂದು ತಂದೆ ತಾಯಿ ಎದುರಲ್ಲೇ ತಮ್ಮನಿಗೆ ಇರಿದಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಬಾಲು ಮೃತಪಟ್ಟಿದ್ದಾನೆ ಎಂದು ವೈಟ್​ಫೀಲ್ಡ್​ ಡಿಸಿಪಿ ಗಿರೀಶ್​ ತಿಳಿಸಿದ್ದಾರೆ.

ಕೊಲೆಗೈದು ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ತಕ್ಷಣ ಕಾರ್ಯಪ್ರವೃತ್ತರಾದ ಕೆ.ಆರ್.​ಪುರ ಪೊಲೀಸರು ಸಾರ್ವಜನಿಕರ ಸಹಾಯದೊಂದಿಗೆ ಬೆನ್ನತ್ತಿ ಅವಲಹಳ್ಳಿ ಸಮೀಪ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ. ಆಗಾಗ್ಗೆ ಜಗಳ ಕೂಡ ಮಾಡುತ್ತಿದ್ದರು, ಇಬ್ಬರಿಗೂ ತಂದೆ ಬುದ್ಧಿವಾದ ಹೇಳುತ್ತಿದ್ದರು. ಘಟನಾ ಸ್ಥಳಕ್ಕೆ ವೈಟ್​ಫೀಲ್ಡ್​ ಡಿಸಿಪಿ ಗಿರೀಶ್​ ಮತ್ತು ಕೆ.ಆರ್​.ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net