ಪಿಂಚಣಿ ಹಣಕ್ಕಾಗಿ ತಮ್ಮಂದಿರಿಂದಲೇ ಅಣ್ಣನ ಕೊಲೆ

Published on

ಗೌರಿಬಿದನೂರು: ತಾಲೂಕಿನ ಮೇಳ್ಯ ಗ್ರಾಮದಲ್ಲಿ ತಾಯಿಗೆ ಬರುತ್ತಿದ್ದ ಪಿಂಚಣಿ ಹಣಕ್ಕಾಗಿ ತಮ್ಮಂದಿರೇ ಅಣ್ಣನನ್ನು ಕೊಲೆ ಮಾಡಿದ್ದಾರೆ. ಗ್ರಾಮದ ಹನುಮಂತರಾಯಪ್ಪನ ಪುತ್ರ ನರಸಿಂಹ ಮೂರ್ತಿ(45) ಕೊಲೆಯಾದವರು. ರಾಮಾಂಜಿ ಹಾಗೂ ಗಂಗಾಧರಪ್ಪ ಆರೋಪಿಗಳು. ಹನುಮಂತರಾಯಪ್ಪ ಲೈನ್​ಮನ್​ ಆಗಿದ್ದರು. ಅವರು ಮೃತಪಟ್ಟ ನಂತರ ಆತನ ಪತ್ನಿ ಗಂಗಮ್ಮನಿಗೆ ಪಿಂಚಣಿ ಬರುತ್ತಿತ್ತು. ಈ ಹಣ ಹಂಚಿಕೊಳ್ಳುವ ವಿಚಾರದಲ್ಲಿ ನರಸಿಂಹ ಮೂರ್ತಿ ಹಾಗೂ ಸಹೋದರರ ನಡುವೆ ಜಗಳ ನಡೆಯುತ್ತಿತ್ತು. ಇದೇ ವಿಚಾರದಲ್ಲಿ ಬುಧವಾರ ಮಧ್ಯಾಹ್ನವೂ ಜಗಳವಾಗಿದ್ದು, ಸಹೋದರರಾದ ರಾಮಾಂಜಿ ಹಾಗೂ ಗಂಗಾಧರಪ್ಪ ನರಸಿಂಹ ಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಸ್ವಸ್ಥಗೊಂಡ ನರಸಿಂಹಮೂರ್ತಿಯನ್ನು ಸಂಬಂಧಿಕರು ಆಸ್ಪತ್ರೆಗೆ ಸಾಗಿಸುವ ವೇಳೆಗೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೃತನ ಪತ್ನಿ ಮಹೇಶ್ವರಮ್ಮ ಗ್ರಾಮಾಂತರ ಠಾಣೆಗೆ ದೂರು ದಾಖಲಿಸಿದ್ದು, ಸ್ಥಳಕ್ಕೆ ಡಿವೈಎಸ್​ಪಿ ಶಿವಕುಮಾರ್​, ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ್​, ಗ್ರಾಮಾಂತರ ಪಿಎಸ್​ಐ ರಮೇಶ್​ ಗುಗ್ಗರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net