ಬೇಲೂರು: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಅಣ್ಣನೇ ತಮ್ಮನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದ ಕೇಶವ ನಗರದ ಸಂಗಯ್ಯ (58) ಕೊಲೆಯದವರು. ಸಹೋದರ ಈರಯ್ಯ ಮತ್ತು ಆತನ ಮಗ ಲಕ್ಷ್ಮಣ ಕೊಲೆ ಮಾಡಿದವರು.
ಅರೇಹಳ್ಳಿ ಪಟ್ಟಣದ ಕೇಶವನಗರದಲ್ಲಿ ವಾಸವಿರುವ ಸಂಗಯ್ಯ ಹಾಗೂ ಈರಯ್ಯ ಸಹೋದರರಿಗೆ ಸಮೀಪದ ಗೂರ್ಗಿಹಳ್ಳಿ ಗ್ರಾಮದಲ್ಲಿ 4 ಎಕರೆ ಕಾಫಿ ತೋಟವಿದೆ. ಮಂಗಳವಾರ ಬೆಳಗ್ಗೆ ತೋಟದಲ್ಲಿ ಮೆಣಸು ಕೊಯ್ಯುವ ವಿಷಯಕ್ಕೆ ತೋಟದಲ್ಲಿ ಸಹೋದರರಿಬ್ಬರು ಮತ್ತು ಅವರ ಇಬ್ಬರು ಮಕ್ಕಳ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಈ ಸಂದರ್ಭ ಗಲಾಟೆ ವಿಕೋಪಕ್ಕೆ ಹೋಗಿದೆ. ಈರಯ್ಯ ಮತ್ತು ಮಗ ಲಕ್ಷ್ಮಣ ಅವರು ಸಂಗಯ್ಯ, ಪುತ್ರ ಚಂದನ್ ಮತ್ತು ಕೂಲಿ ಕಾರ್ಮಿಕ ಬಸವರಾಜು ಎಂಬಾತನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.