ಮೂಲಸೌಕರ್ಯಕ್ಕೆ ಒತ್ತಾಯಿಸಿ ಪೊರಕೆ ಚಳವಳಿ

23 HANUR 4
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಹನೂರು: ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬುಧವಾರ ರಾಮಾಪುರ ಗ್ರಾಮ ಪಂಚಾಯಿತಿಯ ಮುಂಭಾಗ ಮಹಿಳೆಯರು ರೈತ ಸಂಘಟನೆಯ ಜತೆಗೂಡಿ ಪೊರಕೆ ಚಳವಳಿ ನಡೆಸಿದರು.

ದಿನ್ನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೆರೆದಿದ್ದ ನೂರಾರು ಮಹಿಳೆಯರು ಹಾಗೂ ರೈತ ಸಂಘಟನೆಯ ಪದಾಧಿಕಾರಿಗಳು ಅಗತ್ಯ ಮೂಲಸೌಕರ್ಯವನ್ನು ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ಗ್ರಾಪಂ ಅಧಿಕಾರಿಗಳ ವಿರುದ್ಧ ಪೊರಕೆ ಹಿಡಿದು ಘೋಷಣೆ ಕೂಗುತ್ತಾ ಮೆರವಣಿಗೆಯ ಮೂಲಕ ಗ್ರಾಪಂ ಕಚೇರಿ ಮುಂಭಾಗಕ್ಕೆ ತೆರಳಿ ಧರಣಿ ಕುಳಿತರು.

ಈ ವೇಳೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ರಾಮಾಪುರ ಗ್ರಾಪಂ ವ್ಯಾಪ್ತಿಯಲ್ಲಿ 11 ಗ್ರಾಮಗಳಿವೆ. ಆದರೆ ಬೀದಿ ಹಾಗೂ ಚರಂಡಿ ಸ್ವಚ್ಛತೆಯಿಂದ ಕೂಡಿಲ್ಲ. ಇದರಿಂದ ಜನರಲ್ಲಿ ರೋಗರುಜಿನಗಳ ಭೀತಿ ಆವರಿಸಿದೆ. ಸಮರ್ಪಕ ಕುಡಿಯುವ ನೀರು ಪೂರೈಸದ ಪರಿಣಾಮ ಜನರು ಕೂಲಿಯನ್ನು ಬಿಟ್ಟು ನೀರಿಗಾಗಿ ಅಲೆಯುಂತಾಗಿದೆ. ಇತ್ತ ನರೇಗಾ ಯೋಜನೆಯಡಿ ಮಹಿಳೆಯರಿಗೆ ಕೂಲಿ ಕೆಲಸ ನೀಡುತ್ತಿಲ್ಲ. ಇದರಿಂದ ಕೂಲಿಗಾಗಿ ಬೇರೆಡೆಗೆ ತೆರಳುವಂತಾಗಿದೆ. ಆದರೆ ಈ ಬಗ್ಗೆ ಕ್ರಮವಹಿಸುವಲ್ಲಿ ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಆದ್ದರಿಂದ ಸ್ಥಳಕ್ಕೆ ಜಿಪಂ ಸಿಇಒ ಅವರು ಆಗಮಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಗ್ರಾಪಂಗೆ ಬೀಗ ಜಡಿಯಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಉಪಾಧ್ಯಕ್ಷ ಪಳನಿಸ್ವಾಮಿ ಮಾತನಾಡಿ, ನಾಗಣ್ಣನಗರದಲ್ಲಿ ಜನರು ನೆಲೆನಿಂತು 30 ವರ್ಷಗಳೇ ಕಳೆದಿದೆ. ಆದರೆ ಗ್ರಾಪಂ ವ್ಯಾಪ್ತಿಗೆ ಸೇರಿಲ್ಲ. ಇದರಿಂದ ಇಲ್ಲಿನ ಜನರು ಸರ್ಕಾರದಿಂದ ಸಿಗುವ ಸವಲತ್ತು ಹಾಗೂ ಅಗತ್ಯ ಮೂಲಸೌಕರ್ಯದಿಂದ ವಂಚಿತರಾಗಿದ್ದು, ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಗ್ರಾಮವನ್ನು ಗ್ರಾಪಂ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಪುದು ರಾಮಾಪುರದ ವೇಲುಸ್ವಾಮಿ ಮಾತನಾಡಿ, ಕಳೆದ ಒಂದು ವರ್ಷದ ಹಿಂದೆ ಗ್ರಾಮಕ್ಕೆ ಆರೋಗ್ಯ ಉಪ ಕೇಂದ್ರ ಮಂಜೂರಾಗಿತ್ತು. ಆದರೆ ಗ್ರಾಪಂ ಅಧಿಕಾರಿಗಳು ಇ ಸ್ವತ್ತು ಮಾಡಿಕೊಡದ ಪರಿಣಾಮ ಆರೋಗ್ಯ ಕೇಂದ್ರ ಬೇರೆ ಗ್ರಾಮಕ್ಕೆ ವರ್ಗಾವಣೆಯಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ಅಧಿಕಾರಿಗಳು ಜನರಿಗೆ ಸಕಾಲದಲ್ಲಿ ಇ ಸ್ವತ್ತು ಮಾಡಿಕೊಡಬೇಕು ಎಂದರು.

ಪಳನಿಮೇಡು ಗ್ರಾಮದ ರಾಜಮಣಿ ಮಾತನಾಡಿ, ಗ್ರಾಮದಲ್ಲಿ ಸ್ವಚ್ಛತೆ ಇಲ್ಲ, ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ದೂರಿದರೆ, ಇದೇ ಗ್ರಾಮದ ಕನಕಮ್ಮ ಗ್ರಾಮಕ್ಕೆ ಅಂಗನವಾಡಿ ಕೇಂದ್ರವಿಲ್ಲದೇ ಮಕ್ಕಳಿಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಈ ಬಗ್ಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಾಪಂ ಎಡಿ ರಾಧ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಕಾರರು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಕೆ.ಎನ್. ಚೈತ್ರಾ ಅವರು ಸಮಸ್ಯೆಯನ್ನು ಆಲಿಸಿ ಮನವಿ ಸ್ವೀಕರಿಸಿ ಮಾತನಾಡಿ, ಈ ಸಂಬಂಧ ಸಿಇಒ ಅವರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಪೂಂಗುಡಿ, ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್, ಉಪಾಧ್ಯಕ್ಷ ಪಳನಿಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ರಾಜಮಣಿ, ಪದಾಧಿಕಾರಿಗಳಾದ ಕೂಡಲೂರು ವೆಂಕಟಾಚಲ, ಶಕ್ತಿವೇಲು ಹಾಗೂ ರಾಮಾಪುರ ಗ್ರಾಪಂ ವ್ಯಾಪ್ತಿಯ ಮಹಿಳೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net