ಕೆಟ್ಟು ನಿಂತ ಶುದ್ಧ ನೀರಿನ ಘಟಕ

Kailancha-Ph-001-Neeru Gatak-Samsye-Photo- Kailancha Neeru Gataka-12-6-2024
Published on

* ಮೂರು ತಿಂಗಳಿಂದ ನಿರ್ವಹಣೆ ಇಲ್ಲ

* ಕೈಲಾಂಚ ಸುತ್ತಮುತ್ತಲ ಗ್ರಾಮಸ್ಥರಿಗೆ ಪರದಾಟ

* ಗ್ರಾಪಂ ವಿರುದ್ಧ ಆಕ್ರೋಶ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಹೋಬಳಿ ಕೇಂದ್ರದಲ್ಲೇ ಶುದ್ಧ ನೀರಿನ ಘಟಕ ಕೆಟ್ಟಿದ್ದು, ಕೈಲಾಂಚ ಮತ್ತು ಸುತ್ತಮುತ್ತಲ ಗ್ರಾಮಸ್ಥರಿಗೆ ಶುದ್ಧ ನೀರು ದೊರೆಯದಂತಾಗಿದೆ. ಕೂಡಲೇ ಘಟಕ ಚಾಲನೆಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸರ್ಕಾರಿ ಪ್ರಾಥಮಿಕ ಶಾಲೆ ಎದುರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊಂದಿಕೊಂಡಂತೆ ಗ್ರಾಮದಲ್ಲಿ ಸ್ಥಳೀಯ ಸಂಸದರ ನಿಧಿಯಲ್ಲಿ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣ ಆಗಿದೆ. ಕೈಲಾಂಚ ಗ್ರಾಮ ಹೋಬಳಿ ಕೇಂದ್ರವಾಗಿದ್ದು, 2000ಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಸಾಕಷ್ಟು ಜನರಿಗೆ ಈ ಘಟಕ ವರದಾನವಾಗಿತ್ತು.

ಆದರೆ, ಮೂರು ತಿಂಗಳಿಂದ ನಿರ್ವಹಣೆ ಕಾಣದೆ ಶುದ್ಧ ಕುಡಿಯುವ ನೀರು ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಇದೇ ಘಟಕವನ್ನು ಪಕ್ಕದ ಗ್ರಾಮಸ್ಥರು ಬಳಸುತ್ತಿದ್ದಾರೆ. ಹತ್ತಿರದಲ್ಲಿ ಯಾವುದೇ ಶುದ್ಧ ನೀರಿನ ಘಟಕಗಳಿಲ್ಲ. ಅಂಕನಹಳ್ಳಿ ಇಲ್ಲವೇ ಕೆ.ಪಿ. ದೊಡ್ಡಿ ಸಿಲ್ಕ್ ಫಾರ್ಮ್ ಅಥವಾ ವಡ್ಡರಹಳ್ಳಿ ಮತ್ತಿತರ ದೂರದ ಗ್ರಾಮಗಳಿಗೆ ಹೋಗಿ ಶುದ್ಧ ನೀರು ತರುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಶುದ್ಧ ನೀರು ಇಲ್ಲದ ಪರಿಣಾಮ ಬೋರ್‌ವೆಲ್ ನೀರು ಕುಡಿಯುವಂತಾಗಿದೆ. ಗ್ರಾಮ ಹೋಬಳಿ ಕೇಂದ್ರವಾಗಿರುವುದರಿಂದ ಬೆಸ್ಕಾಂ, ಪ್ರಾಥಮಿಕ ಆರೋಗ್ಯ ಕೇಂದ್ರ, ಕಂದಾಯ ಇಲಾಖೆ ಉಪ ತಹಸೀಲ್ದಾರ್ ಕಾರ್ಯಾಲಯ, ಕೃಷಿ ರೈತ ಸಂಪರ್ಕ ಕೆಂದ್ರ, ಸರ್ಕಾರಿ ಪ್ರಾಥಮಿಕ ಶಾಲೆ, ಪೆಟ್ರೋಲ್ ಬಂಕ್, ವಾಣಿಜ್ಯ ಮಳಿಗೆಗಳು, ಮೆಡಿಕಲ್ ಶಾಪ್, ರೈತ ಉತ್ಪನ್ನ ಮಾರಾಟ ಘಟಕಗಳು, ಸರ್ಕಾರಿ ಪ್ರೌಢಶಾಲೆ, ಗ್ರಾಪಂ ಕಚೇರಿಗಳಿವೆ.

ಪ್ರತಿನಿತ್ಯ ಹೋಬಳಿ ವ್ಯಾಪ್ತಿಯ ಜನರು ಒಂದಲ್ಲ ಒಂದು ಕೆಲಸಕ್ಕೆ ನೂರಾರು ಸಂಖ್ಯೆಯಲ್ಲಿ ಕೈಲಾಂಚಕ್ಕೆ ಬಂದು ಹೋಗುತ್ತಿರುತ್ತಾರೆ. ಕಚೇರಿಗಳಿಗೆ, ಬಹುಮುಖ್ಯವಾಗಿ ಶಾಲಾ ಮಕ್ಕಳಿಗೆ ಜನರಿಗೆ ಶುದ್ಧನೀರು ಬೇಕಾಗಿದೆ. ಈ ಭಾಗದಲ್ಲಿ ಅಂತರ್ಜಲ ತಳ ಸೇರಿದ್ದು, ಈ ನೀರಿನಲ್ಲಿ ಪ್ಲೋರೈಡ್‌ಯುಕ್ತ ಅಂಶ ಹೆಚ್ಚಾಗಿದ್ದು, ಈ ನೀರು ಕುಡಿದರೆ ಆರೋಗ್ಯ ಸಮಸ್ಯೆ ಕಾಡುತ್ತದೆ.

ಗ್ರಾಪಂನಿಂದ ಶುದ್ಧ ನೀರಿನ ಘಟಕ ಸುಪರ್ದಿಗೆ ಪಡೆದಿಲ್ಲ. ಘಟಕ ಹಳೆಯದಾಗಿದ್ದು, ಕೂಡಲೇ ಗ್ರಾಪಂ ಹೊಸ ಘಟಕ ನಿರ್ಮಾಣಕ್ಕೆ ಮುಂದಾಗಬೇಕು. ತಾಪಂ, ಜಿಪಂ ಕೂಡಲೇ ಘಟಕ ನಿರ್ಮಾಣಕ್ಕೆ ಚಾಲನೆ ನೀಡಿ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಬವಣೆ ನೀಗಿಸಬೇಕು ಎಂದು ಗ್ರಾಮದ ಸುರೇಶ್ ಆಗ್ರಹಿಸಿದ್ದಾರೆ.

ಶುದ್ಧ ನೀರು ಬೇಕೆಂದರೆ 4 ಕಿಮೀ ದೂರ ತೆರಳಿ ತರಬೇಕು. ಘಟಕ ಹಳೆಯದಾಗಿ ಉಪಯೋಗಕ್ಕೆ ಬರದಂತಾಗಿದೆ. ಹೊಸ ಘಟಕ ನಿರ್ಮಾಣವಾದರೆ ನೀರಿನ ಬವಣೆ ತಪ್ಪಿಸಬಹುದು. ಗ್ರಾಪಂ ಹೊಸ ಘಟಕ ನಿರ್ಮಾಣಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಬೇರೆ ಗ್ರಾಮಕ್ಕೆ ಶುದ್ಧ ನೀರಿಗಾಗಿ ಜನರು ಅಲೆಯುವುದು ತಪ್ಪುವುದಿಲ್ಲ.

ದೀಪು, ಕೈಲಾಂಚ

ಘಟಕ ಹಳೆಯದಾಗಿದ್ದು, ಯಂತ್ರಗಳು ದುರಸ್ತಿಯಾಗದಂತಾಗಿವೆ. ಹೆಚ್ಚಿನ ಹಣ ವ್ಯಯವಾಗುವ ಕಾರಣ ನೂತನ ಯಂತ್ರ ಜೋಡಣೆಗೆ ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಅವರಲ್ಲಿ ಅನುದಾನ ಕೇಳಲಾಗಿದೆ. ಶಾಸಕರು ಭರವಸೆ ನೀಡಿದ್ದು, ಅವರ ಅನುದಾನದಲ್ಲಿ ಸುಸಜ್ಜಿತ ಶುದ್ಧ ಕುಡಿಯುವ ನೀರಿನ ಘಟಕ ಸ್ವಲ್ಪ ದಿನಗಳಲ್ಲೇ ತಲೆ ಎತ್ತಲಿದೆ.

ರತ್ನಮ್ಮ, ಗ್ರಾಪಂ ಅಧ್ಯಕ್ಷೆ, ಕೈಲಾಂಚ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net