

ದಾವಣಗೆರೆ: ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ರಾಜಿರಹಿತ ಹೋರಾಟ ನಡೆಸಿದ ಭಗತ್‌ಸಿಂಗ್ ಇಂದಿನ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಆದರ್ಶವಾಗಬೇಕು ಎಂದು ಎಐಎಂಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ಕೆ. ಭಾರತಿ ಹೇಳಿದರು.
ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಎಸ್ ಸಂಘಟನೆಗಳಿಂದ ನಗರದ ರೈಲ್ವೆ ನಿಲ್ದಾಣದ ಮುಂಭಾಗ ಗುರುವಾರ ಹಮ್ಮಿಕೊಂಡಿದ್ದ ದೇಶದ ಧೀರ ಹುತಾತ್ಮ ಭಗತ್ ಸಿಂಗ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಗತ್ ಸಿಂಗ್ ಅವರು ಜಾತಿ-ಧರ್ಮಗಳ ಗಡಿ ಮೀರಿ ಎಲ್ಲರೂ ಭಾರತವೆಂಬ ಒಂದೇ ಸೂರಿನಡಿ ಬದುಕುವಂತಾಗಬೇಕು ಎಂದು ಸಮಸಮಾಜದ ಕನಸು ಕಂಡಿದ್ದರು.
ಇಂದಿನ ಶಿಕ್ಷಣ ವ್ಯಾಪಾರೀಕರಣ, ನಿರುದ್ಯೋಗ, ಮಹಿಳಾ ದೌರ್ಜನ್ಯ, ಜಾತಿ ಹಾಗೂ ಕೋಮು ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಅವರ ವಿಚಾರಗಳು ಸ್ಫೂರ್ತಿಯಾಗಬೇಕು ಎಂದರು.
ಎಐಡಿವೈಒ ಜಿಲ್ಲಾ ಸಂಚಾಲಕ ಪರಶುರಾಮ ಮಾತನಾಡಿ, ಮನುಷ್ಯನ ಮೇಲಿನ ಶೋಷಣೆ ತಡೆ ಸಾಕಾರವಾಗಲು ಸಾಮ್ರಾಜ್ಯಶಾಹಿ ಹಾಗೂ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಭಗತ್ ಸಿಂಗ್‌ರ ನಿಲುವಾಗಿತ್ತು.
ಈ ನಿಟ್ಟಿನಲ್ಲಿ ವಿದ್ಯಾರ್ಥಿ ಯುವಜನರು ಹಾಗೂ ಮಹಿಳೆಯರು ಕ್ರಾಂತಿಕಾರಿ ಹೋರಾಟದಲ್ಲಿ ಭಾಗವಹಿಸಿದಾಗ ಮಾತ್ರ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಲು ಸಾಧ್ಯ ಎಂದು ಹೇಳಿದರು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ಮಾತನಾಡಿ, ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ, ಮಹಿಳೆಯರಿಗೆ ಭದ್ರತೆ, ಯುವಕರಿಗೆ ಉದ್ಯೋಗ, ರೈತರು ಬೆಳೆಗೆ ಬೆಂಬಲ ಬೆಲೆ ಸಿಗಬೇಕು.
ಇದಕ್ಕಾಗಿ ಸಮಾಜವಾದ ತರುವುದು ನಮ್ಮ ಗುರಿಯಾಗಬೇಕು. ಸಮಾಜವಾದಿ ಭಾರತ ನಿರ್ಮಾಣಕ್ಕಾಗಿ ಹೋರಾಡಬೇಕು ಎಂದು ತಿಳಿಸಿದರು.
ಸಂಘಟನಾಕಾರರಾದ ಅನಿಲ್, ಕಾವ್ಯ, ಗುರು, ಶಶಿ, ಹರಿಪ್ರಸಾದ್, ವಿದ್ಯಾರ್ಥಿಗಳಾದ ಗುರುಪ್ರಸಾದ್, ಗುರುಕಿರಣ್, ನಂದೀಶ್, ವಿ. ಪೂಜಾ ಇತರರು ಇದ್ದರು.