

ಪ್ರೊ. ಕೆ.ವೆಂಕಟಗಿರಿ ಗೌಡರಿಂದ ವಿಶ್ವ ಖ್ಯಾತಿಯಾದ ಗ್ರಾಮ
ಬಹುಪಾಲು ಒಕ್ಕಲಿಗರೇ ನೆಲೆಸಿರುವ ಗ್ರಾಮ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಬೈರಾಪಟ್ಟಣ ಚನ್ನಪಟ್ಟಣ ತಾಲೂಕಿನ ದೊಡ್ಡ ಗ್ರಾಮಗಳಲ್ಲೊಂದು. ಕೇವಲ ವಿಸ್ತಾರದಲ್ಲಷ್ಟೇ ಅಲ್ಲದೆ, ವಿಶ್ವಕ್ಕೆ ಶ್ರೇಷ್ಠ ಅರ್ಥಶಾಸ್ತ್ರಜ್ಞರನ್ನು ನೀಡಿರುವ ಹೆಗ್ಗಳಿಕೆ ಗ್ರಾಮಕ್ಕಿದೆ.
ಗ್ರಾಮದಲ್ಲಿ ಸರ್ವಜನಾಂಗಗಳು ಸಹಬಾಳ್ವೆಯಿಂದ ನೆಲೆಸಿದ್ದಾರೆ. ಗ್ರಾಮ ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಛಾಪು ಮೂಡಿಸಿದೆ. ಈ ಹಿಂದೆ ಭೈರೋಜಿ ಎಂಬ ದೊರೆ ಆಳ್ವಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮವನ್ನು ಭೈರೋಜಿಪಟ್ಟಣ ಎನ್ನಲಾಗುತ್ತಿತಂತೆ. ಕಾಲಕ್ರಮೇಣ ಅದು ಬೈರಾಪಟ್ಟಣವಾಗಿದೆೆ ಎನ್ನಲಾಗುತ್ತಿದೆ. ಮತ್ತೊಂದೆಡೆ, ಹೈದರಾಲಿ ಕಡೆಯ ಸೈನಿಕರು ಬೈರನಾಯಕ ಎಂಬುವವನನ್ನು ಗ್ರಾಮದ ಬಳಿ ಕೊಂದ ಕಾರಣದಿಂದ ಗ್ರಾಮಕ್ಕೆ ಬೈರಾಪಟ್ಟಣ ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ.
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಶೈಕ್ಷಣಿಕ ಗುರುವಾಗಿದ್ದ ಗೌಡರು, ಕೃಷ್ಣ ಅವರ ರಾಜಕೀಯ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರವಹಿಸಿದವರು. ನಿವೃತ್ತಿ ನಂತರ 1984ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತ ಬಳಿಕ 1991ರಲ್ಲಿ ಅದೇ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಆರ್. ಗುಂಡೂರಾವ್‌ಗೆ ಸೋಲಿನ ರುಚಿ ತೋರಿಸಿದರು. ಜತೆಗೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದ ಅವರು, ಸಂಘದ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿದರು.
ಗ್ರಾಮದ ನೂರಾರು ಎಕರೆ ಜಾಗವನ್ನು ಗ್ರಾಮಸ್ಥರು ದೊಂಬನ ಕೊಡುಗೆ ಎಂದು ಕರೆಯುತ್ತಾರೆ. ಇದೇನು ದೊಂಬನ ಕೊಡುಗೆ? ಎಂದು ಹುಡುಕಿದರೆ, ಬಹಳ ವರ್ಷಗಳ ಹಿಂದೆ ಗ್ರಾಮಕ್ಕೆ ದೊಂಬರ ಕುಟುಂಬವೊಂದು (ಅಲೆಮಾರಿ) ಭಿಕ್ಷಾಟನೆಗೆ ಬಂದಿತಂತೆ. ಈ ವೇಳೆ ಗ್ರಾಮದ ಗೌಡರೊಬ್ಬರ ಮನೆಯಲ್ಲಿ ಭಿಕ್ಷೆ ಕೇಳುತ್ತಾರೆ. ಕೈಕಾಲು ಗಟ್ಟಿಯಾಗಿರುವಾಗ ಭಿಕ್ಷೆ ಬೇಡಲು ನಾಚಿಕೆಯಾಗುವುದಿಲ್ಲವೇ ಎಂದು ಗೌಡ ಹೀಯಾಳಿಸುತ್ತಾನಂತೆ. ಆಗ ಪವಾಡ ಮಾಡುವುದು ಹಾಗೂ ಭಿಕ್ಷೆ ಬೇಡುವುದು ನಮ್ಮ ಕುಲಕಸುಬು ಎಂದು ದೊಂಬ, ಗೌಡರ ಜತೆ ವಾದಿಸುತ್ತಾನೆ. ಆಗ ಗೌಡ ಯಾವುದಾದರೂ ಪವಾಡ ಮಾಡು ಎಂದು ಸವಾಲು ಹಾಕುತ್ತನಂತೆ. ಆಗ ದೊಂಬ ಕಂಕಳುಗಳಿಗೆ ಮೊರ (ಅಕ್ಕಿ ಸೋಸುವ ವಸ್ತು) ಕಟ್ಟಿಕೊಂಡು ಪಶ್ಚಿಮದಿಂದ ಪೂರ್ವಕ್ಕೆ ಹಾರುತ್ತಾ, ಕೊನೆಗೆ ಒಂದು ಜಾಗದಲ್ಲಿ ಬಿದ್ದು ರಕ್ತ ಕಾರಿ ಸಾಯುತ್ತಾನೆ. ಈ ಘಟನೆ ಬಳಿಕ ಈ ಸಾವಿಗೆ ನಾನೇ ಕಾರಣ ಎಂದು ಬಹಳ ನೋವು ಪಟ್ಟುಕೊಂಡ ಗೌಡ, ದೊಮ್ಮ ಹಾರಿಕೊಂಡು ಹೋದಷ್ಟು ಜಾಗವನ್ನು ಆ ಕುಟುಂಬಕ್ಕೆ ಕೊಡುಗೆಯಾಗಿ ನೀಡಿದರಂತೆ. ಬಳಿಕ ದೊಮ್ಮ ರಕ್ತಕಾರಿ ಸತ್ತ ಜಾಗದಲ್ಲಿ ಆತನ ನೆನಪಿಗೆ ಮಂಟಪ ಕಟ್ಟಿದರಂತೆ. ಇಂದಿಗೂ ಈ ಮಂಟಪವನ್ನು ಸರ್ಕಾರಿ ಶಾಲಾ ಆವರಣದಲ್ಲಿ ಕಾಣಬಹುದು.
ಗ್ರಾಮದಲ್ಲಿ ಪುರಾತನ ಹಿನ್ನೆಲೆಯುಳ್ಳ (ಚೋಳರ ಕಾಲದ) ಲಕ್ಷ್ಮೀ ಜನಾರ್ದನಸ್ವಾಮಿ ದೇವಸ್ಥಾನವಿದೆ. ಜತೆಗೆ ಮಾರಮ್ಮ, ಮಾಸ್ತಮ್ಮ, ಬಸವಣ್ಣ, ಬಾರಿಕಲ್ಲು ಆಂಜನೇಯ ಸೇರಿ ಹಲವು ದೇವಾಲಯಗಳಿವೆ. ಎಲ್ಲ ಮಾರಮ್ಮನ ದೇವಾಲಯಗಳಲ್ಲಿ ತಾಯಿಯ ವಿಗ್ರಹ ಇದ್ದರೆ, ಇಲ್ಲಿ ಮಾತ್ರ ಮಾರಮ್ಮ ತಾಯಿ ಲಿಂಗದ ರೂಪದಲ್ಲಿದೆ. ಇನ್ನು ಗ್ರಾಮದ ಯಾವುದೇ ಹಬ್ಬದಲ್ಲೂ ಮಾಂಸಾಹಾರ ಮಾಡುವುದಿಲ್ಲ.