

ಬೈಲುಕುಪ್ಪೆ: ಹಾಡಿ ಜನರ ಮನಸ್ಥಿತಿ ಅರಿತು ಸೂಕ್ಷ್ಮವಾಗಿ ಅವರನ್ನು ಮುಖ್ಯವಾಹಿನಿಗೆ ಕರೆ ತರಬೇಕು ಎಂದು ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ಹಂದಿಗುಡ್ಡ ಕಾವಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಶಿಬಿರಾರ್ಥಿಗಳಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಾಡಿ ಜನರು ಹೆಚ್ಚು ಕಾಡಿನಲ್ಲೇ ಕಾಲ ಕಳೆದು ಗೆಡ್ಡೆ ಗೆಣಸು ತಿಂದು, ಪ್ರಾಣಿಗಳ ಜತೆ ಬೆರೆತು ಬದುಕು ಕಟ್ಟಿಕೊಂಡಿದ್ದಾರೆ. ಅವರ ಅಭಿವೃದ್ಧಿಗೆ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ, ಅವರಲ್ಲಿ ಕೆಲವರು ಕುಡಿತದ ಚಟಕ್ಕೆ ಬಲಿಯಾಗಿದ್ದು, ಅದಕ್ಕೆ ಹಿನ್ನಡೆಯಾಗುತ್ತಿದೆ. ಹಾಗಾಗಿ ಅವರಿಗೆ ಅರಿವು ಮೂಡಿಸುವುದು ಅವಶ್ಯ. ಮದ್ಯಪಾನದಿಂದ ದೂರು ಉಳಿಯುವಂತೆ ಮಾಡಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಅವರಿಗೆ ಅರಿವು ಮೂಡಿಸಬೇಕು. ಇವರ ಮನಸ್ಸನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು ಪ್ರಯತ್ನಿಸಿದರೆ ಬುಡಕಟ್ಟು ಸಮುದಾಯಕ್ಕೆ ನೀವು ಒಂದು ದೊಡ್ಡ ಕೊಡುಗೆ ಕೊಟ್ಟಂತಾಗುತ್ತದೆ ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು.
ಬೆಂಗಳೂರಿನ ವಿಶ್ವವಿದ್ಯಾಲಯ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಂಶುಪಾಲ ಡಾ.ವೇದಾ ಮಾತನಾಡಿ, ಹತ್ತು ದಿನ ನಡೆಯುವ ಈ ಶಿಬಿರದಲ್ಲಿ ನೀವು ಗಿರಿಜನರ ಜೀವನ ಶೈಲಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರಲ್ಲಿರುವ ದುಶ್ಚಟ, ಕುಟುಂಬದ ನಿರ್ವಹಣೆ ಹೇಗಿದೆ ಎಂಬುದನ್ನು ಅರಿಯಬೇಕು ಎಂದು ತಿಳಿಸಿದರು.
ಬೈಲುಕುಪ್ಪೆ ಗ್ರಾಮ ಪಂಚಾಯಿತಿ ಪಿಡಿಒ ಬೋರೇಗೌಡ ಮಾತನಾಡಿ, ಹಾಡಿ ಜನಾಂಗದ ಸಮುದಾಯಕ್ಕೆ ಸರ್ಕಾರದಿಂದ ಯಾವುದೇ ಸವಲತ್ತು ಬಂದರೂ ಇವರ ಗಮನಕ್ಕೆ ತರುತ್ತೇನೆ. ಜತೆಗೆ ಈ ಬಾರಿ ಸರ್ಕಾರದಿಂದ ಸಿಗುವ 59 ಗುಂಪು ಮನೆ ಕೊಡಿಸಲು ನಮ್ಮ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಹಂತ ಹಂತವಾಗಿ ಬೇರೆ ಸವಲತ್ತುಗಳನ್ನು ಅವರಿಗೆ ಒದಗಿಸಲಾಗುತ್ತಿದೆ ಎಂದರು.
ಹಾಡಿಗೆ ತೆರಳುವ ಶಿಬಿರಾರ್ಥಿಗಳಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ನಾವು ಮಾಡುತ್ತೇವೆ. ವಿದ್ಯಾರ್ಥಿಗಳು ಶಿಬಿರ ಮುಗಿಸಿ ಯಾವುದೇ ಸಮಸ್ಯೆ ಬಾರದಂತೆ ಸುರಕ್ಷಿತವಾಗಿ ಹಿಂತಿರುಗಬೇಕು ಎಂದು ಮನವಿ ಮಾಡಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಿಬಿರಾರ್ಥಿಗಳು ಮೆರವಣಿಗೆ ಮಾಡಿದರು.
ಬೈಲುಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ, ಗ್ರಾಮದ ಮುಖಂಡ ರಮೇಶ್, ಮುತ್ತಯ್ಯ, ಶಿಬಿರದ ಸಂಯೋಜಕಿ ಅನಿತಾ, ಶಿವಕುಮಾರ್, ಗೋಪಾಲಕೃಷ್ಣ, ಮಂಜುಳಾ, ಶಿಬಿರಾರ್ಥಿಗಳಾದ ಪ್ರಸಾದ್, ತೃಪ್ತಿ, ಅಭಿಷೇಕ್, ಸುನಿತಾ, ದಿವ್ಯಾ, ಅನುಪ ಸೇರಿದಂತೆ ಸುಮಾರು 35 ಹೆಚ್ಚು ಜನ ಇದ್ದರು.