

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ವಶದಲ್ಲಿರುವ ಸೌಲಭ್ಯಗಳಿಂದ ಕೂಡಿದ ತೂಮಿನಾಡು ಜಂಕ್ಷನ್‌ನಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಸ್ಥಳ ಗುರುತಿಸುವಿಕೆ ನಡೆದು ಮಂಜೂರಾದ ಕಾಲುಸೇತುವೆಯನ್ನು ಖಾಸಗಿ ವ್ಯಕ್ತಿಗಳ ಹಿತಾಸಕ್ತಿಗಾಗಿ ಬೇರೆಡೆ ಸ್ಥಳಾಂತರಿಸಲು ರಾತ್ರೋರಾತ್ರಿ ಹುನ್ನಾರ ನಡೆಸಿದ ಉದ್ದೇಶ ಹಾಗೂ ಇದರ ಹಿಂದೆ ಕಾರ್ಯಾಚರಿಸಿದ ಕೆಲವೊಂದು ಕಾಣದ ಕೈಗಳ ನಡೆ ಹಲವು ಶಂಕೆಗೆ ಕಾರಣವಾಗಿರುವುದಾಗಿ ಸ್ಥಳೀಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಅಕ್ರಮ ಕಾರ್ಯದಿಂದ ಉದ್ರಿಕ್ತಗೊಂಡ ಜನರು ಅಧಿಕಾರಿಗಳ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ತಕ್ಷಣ ಈ ಸ್ಥಳಾಂತರವನ್ನು ತಡೆಗಟ್ಟುವಂತೆ ಒತ್ತಾಯಿಸಿದ್ದಾರೆ. ಶಾಸಕರ ಸಮ್ಮುಖದಲ್ಲಿ ಈ ಮೊದಲು ಸ್ಥಳ ಗುರುತಿಸುವಿಕೆ ನಡೆದಿರುವ ಹಿನ್ನೆಲೆಯಲ್ಲಿ ಶಾಸಕರು ಕೂಡಲೇ ಮಧ್ಯ ಪ್ರದೇಶಿಸಿ ಸ್ಥಳಾಂತರವನ್ನು ತಡೆಯುವಂತೆ, ಮೊದಲು ಗುರುತಿಸಿದ ಸ್ಥಳದಲ್ಲೇ ಕಾಲುಸೇತುವೆ ನಿರ್ಮಿಸಿಕೊಡುವಂತೆ ವಿವಿಧ ರಾಜಕೀಯ ಪಕ್ಷಗಳ ನೇತಾರರು ಹಾಗೂ ವಿವಿಧ ಸಂಘಟನೆಗಳು ಒತ್ತಾಯಿಸಿವೆ.
ಈಗಾಗಲೇ ನಿಗದಿ ಪಡಿಸಿರುವ ಸ್ಥಳದಿಂದ ಕುಂಜತ್ತೂರು ಹೈಯರ್ ಸೆಕಂಡರಿ ಶಾಲಾ ವಿದ್ಯಾರ್ಥಿಗಳಿಗೂ ಅನುಕೂಲಕರವಾಗುವ ಸ್ಥಳದ ಜೊತೆಯಾಗಿ ಬಸ್ಸು ನಿಲ್ದಾಣ, ಆಟೋರಿಕ್ಷಾ ನಿಲ್ದಾಣ ಸೇರಿದಂತೆ ಸಾರ್ವಜನಿಕರಿಗೆ ಸಕಲ ಸೌಕರ್ಯವಿರುವ ಸ್ಥಳವನ್ನು ಕೇವಲ ಒಬ್ಬ ಖಾಸಗಿ ವ್ಯಕ್ತಿಯ ಹಣದ ಬಲದಿಂದ ಬದಲಾಯಿಸಿದರೆ ಅದನ್ನು ಯಾವುದೇ ಬೆಲೆ ತೆತ್ತು ಎದುರಿಸಲು ಸಿದ್ಧರಿರುವುದಾಗಿ ಇಲ್ಲಿಯ ನಾಗರಿಕರು ಹೇಳುತಿದ್ದಾರೆ. ಅಧಿಕಾರಿಗಳು ಹಾಗೂ ಶಾಸಕರಿಂದ ಸ್ಪಷ್ಟನೆ ಹಾಗೂ ನ್ಯಾಯವನ್ನು ಇಲ್ಲಿಯ ಜನರು ನಿರೀಕ್ಷಿಸುತಿದ್ದಾರೆ.