

ಶಶಿ ಕುತ್ಯಾಳ
ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಸುಳ್ಯಪದವು ಸಮೀಪದ ದೇವಸ್ಯ ಎಂಬಲ್ಲಿ ಕರ್ನಾಟಕ ಮತ್ತು ಕೇರಳ ಗಡಿ ಭಾಗದಲ್ಲಿ ಸಂಪರ್ಕದ ಕೊಂಡಿಯಾಗಿರುವ ಸೇತುವೆ ಕುಸಿಯುವ ಹಂತಕ್ಕೆ ತಲುಪಿದೆ. ಗಡಿ ಭಾಗದಲ್ಲಿನ ರಸ್ತೆ ಅಭಿವೃದ್ಧಿಗೊಂಡರೂ ಹಳೆಯದಾಗಿರುವ ಸೇತುವೆ ಅಭಿವೃದ್ಧಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷೃ ವಹಿಸಿರುವುದೇ ಈ ಸ್ಥಿತಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಈಶ್ವರಮಂಗಲ-ಸುಳ್ಯಪದವು ರಸ್ತೆಯಿಂದ ಸುಳ್ಯಪದವಿನ ಸರ್ವೋದಯ ಪ್ರೌಢಶಾಲೆ ಬಳಿಯಿಂದ ನಾಟೆಕಲ್ ಮೂಲಕ ಕಾಸರಗೋಡಿನ ಮುಳ್ಳೇರಿಯಾಕ್ಕೆ ಸಂಪರ್ಕ ಕಲ್ಪಿಸುವ ಸುಳ್ಯಪದವು-ಮುಳ್ಳೇರಿಯಾ ರಸ್ತೆಯಲ್ಲಿ ಕರ್ನಾಟಕ-ಕೇರಳ ಗಡಿಭಾಗದಲ್ಲಿ ಕಿರಿದಾದ ದೇವಸ್ಯ ಸೇತುವೆ ಇದೆ. ಈ ಸೇತುವೆ ಕರ್ನಾಟಕಕ್ಕೆ ಸೇರಿದ್ದು, 42 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಅಂತಾರಾಜ್ಯ ಸಂಪರ್ಕದ ದೇವಸ್ಯ ಸೇತುವೆ ಇದೀಗ ಶಿಥಿಲಾವಸ್ಥೆಗೆ ತಲುಪಿ ಕುಸಿಯುವ ಭೀತಿ ಎದುರಾಗಿದೆ.
ಗಡಿಪ್ರದೇಶದ ಜನತೆಯ ಬೇಡಿಕೆಗೆ ಸ್ಪಂದಿಸಿ 1980ರಲ್ಲಿ ಆಗಿನ ಸಂಸದರಾಗಿದ್ದ ಜನಾರ್ದನ ಪೂಜಾರಿ ಅವರು ದೇವಸ್ಯ ಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದರು. ಬಳಿಕದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಸೇತುವೆ ಅಭಿವೃದ್ಧಿ, ನಿರ್ವಹಣೆ ವಿಚಾರದಲ್ಲಿ ಗಮನಹರಿಸದೆ ಇರುವುದರಿಂದ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ಸೇತುವೆ ರಸ್ತೆ ಭಾಗದಲ್ಲಿ ಭೂಕುಸಿತವಾಗಿದ್ದು, ತಡೆಗೋಡೆ ಮತ್ತು ಸೇತುವೆ ಕೆಳಗಿನ ಒಂದು ಭಾಗ ಕುಸಿಯುವ ಹಂತದಲ್ಲಿದೆ. ಸೇತುವೆಗೆ ಅಳವಡಿಸಿದ ಕಲ್ಲುಗಳು ಕಳಚಿ ಹೋಗುತ್ತಿವೆ. ಸೇತುವೆ ಇಕ್ಕೆಡೆಗಳಲ್ಲಿರುವ ತಡೆಗೋಡೆ ನೇತಾಡುವ ಸ್ಥಿತಿಯಲ್ಲಿದೆ. ಸೇತುವೆ ಮೇಲ್ಭಾಗದಲ್ಲೂ ಹೊಂಡಗುಂಡಿಗಳು ನಿರ್ಮಾಣವಾಗಿವೆ.
ಕರ್ನಾಟಕದ ಈಶ್ವರಮಂಗಲ-ಸುಳ್ಯಪದವು ಕಡೆಯಿಂದ ಕೇರಳದ ಮುಳ್ಳೇರಿಯಾಕ್ಕೆ ಸಂಪರ್ಕ ಕಲ್ಪಿಸುವ ಅತಿ ಕಡಿಮೆ ಅಂತರದ ರಸ್ತೆ ಇದಾಗಿದ್ದು, ಕಾಸರಗೋಡಿನಿಂದ ಬದಿಯಡ್ಕ-ಮುಳ್ಳೇರಿಯಾ ಮೂಲಕವಾಗಿ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಸುಳ್ಯಪದವು- ಮುಳ್ಳೇರಿಯಾ ರಸ್ತೆ ಕೇರಳ ಭಾಗದಲ್ಲಿ ಅಭಿವೃದ್ಧಿ ಕಂಡಿದೆ. ಸುಳ್ಯಪದವಿನಿಂದ ಸುಮಾರು 600 ಮೀಟರ್ ತನಕದ ಕರ್ನಾಟಕ ಭಾಗದ ರಸ್ತೆ ಸಂಜೀವ ಮಠಂದೂರು ಶಾಸಕರಾಗಿದ್ದ ಅವಧಿಯಲ್ಲಿ ಕಾಂಕ್ರೀಟ್ ಆಗಿ ಮಾರ್ಪಾಡುಗೊಂಡಿದೆ. ಆದರೆ ಸಂಪರ್ಕ ಸೇತುವೆ ಮಾತ್ರ ಅಭಿವೃದ್ಧಿ ಕಾಣದೆ ಕಿರಿದಾದ ಸ್ಥಿತಿಯಲ್ಲಿಯೇ ಉಳಿದುಕೊಂಡು ಅನಾಹುತಕ್ಕೆ ಆಹ್ವಾನ ನೀಡುತ್ತಿದೆ.
ಗಡಿಭಾಗದ ಸಾವಿರಾರು ಮಂದಿ ನಿತ್ಯ ಈ ರಸ್ತೆಯನ್ನು ಅವಲಂಭಿಸಿದ್ದಾರೆ. ಕೇರಳ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಸುಳ್ಯಪದವಿನ ವಿದ್ಯಾಸಂಸ್ಥೆಗಳಿಗೆ, ಪುತ್ತೂರು ನಗರ ಹಾಗೂ ಇತರ ಕಡೆಗಳಲ್ಲಿರುವ ವಿದ್ಯಾಸಂಸ್ಥೆಗಳಿಗೆ ಇದೇ ರಸ್ತೆ ಮೂಲಕ ಬರುತ್ತಿದ್ದಾರೆ. ಕೇರಳ ನೋಂದಾಯಿತ ಎರಡು ಖಾಸಗಿ ಬಸ್‌ಗಳು, ಸ್ಕೂಲ್ ಬಸ್‌ಗಳು ಸೇರಿದಂತೆ ನೂರಾರು ವಾಹನಗಳು ದಿನನಿತ್ಯ ಈ ರಸ್ತೆಯಲ್ಲಿ ಓಡಾಡುತ್ತಿವೆ. ಸೇತುವೆಯ ಕರ್ನಾಟಕ ಭಾಗದ ರಸ್ತೆ ಬದಿ ಕುಸಿತವಾಗಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಕೆಂಪುಕಲ್ಲು ಸಾಗಾಟದ ಲಾರಿಗಳು ದೇವಸ್ಯ ಸೇತುವೆ ಮೂಲಕ ಸಂಚರಿಸುತ್ತಿವೆ. ಕೇರಳದಲ್ಲಿ ಮದ್ಯ ಮಾರಾಟಕ್ಕೆ ನಿಯಂತ್ರಣ ಇರುವ ಕಾರಣ ಕೇರಳ ಭಾಗದ ಹೆಚ್ಚಿನ ಮದ್ಯಪ್ರಿಯರು ಈ ರಸ್ತೆ ಮೂಲಕವಾಗಿ ದಿನನಿತ್ಯ ಸುಳ್ಯಪದವಿನಲ್ಲಿನ ವೈನ್‌ಶಾಪ್‌ಗಳಿಗೆ ತೆರಳುತ್ತಿದ್ದಾರೆ. ಕೇರಳಿಗರಿಂದಾಗಿಯೇ ಸುಳ್ಯಪದವಿನಲ್ಲಿ ಭರ್ಜರಿ ಮದ್ಯ ಮಾರಾಟವಾಗುತ್ತಿದೆ. ಕರ್ನಾಟಕದಲ್ಲಿ ಲಾಟರಿ ನಿಷೇಧ ಮಾಡಲಾಗಿರುವುದರಿಂದ ಕರ್ನಾಟಕ ಗಡಿಭಾಗದ ಲಾಟರಿ ಪ್ರಿಯರು ಲಾಟರಿ ಟಿಕೆಟ್ ಖರೀದಿಗಾಗಿ ಈ ರಸ್ತೆ ಮೂಲಕ ತೆರಳುತ್ತಾರೆ. ಈ ಲೆಕ್ಕಾಚಾರದಲ್ಲಿ ಎರಡೂ ರಾಜ್ಯಗಳಿಗೂ ಆದಾಯ ತರುವ ರಸ್ತೆ ಇದಾಗಿದ್ದರೂ ಸೇತುವೆ ಅಭಿವೃದ್ಧಿಗೆ ಮುಂದಾಗದಿರುವುದು ವಿಪರ್ಯಾಸ.
ಕೆಲದಿನಗಳ ಹಿಂದೆಯಷ್ಟೇ ಸೇತುವೆಯ ಒಂದು ಬದಿಯ ರಸ್ತೆ ಕುಸಿದಿದೆ. ಈ ನಡುವೆ ಕೆಂಪು ಕಲ್ಲು ಸಾಗಾಟದ ಲಾರಿಯೊಂದು ರಸ್ತೆ ಬದಿಗೆ ವಾಲಿ ಚಾಲಕ ಹಾಗೂ ಕಾರ್ಮಿಕರು ಅಪಾಯದಿಂದ ಪಾರಾದ ಘಟನೆ ನಡೆದಿದೆ. ಇದೀಗ ಕುಸಿತ ಇನ್ನೂ ಹೆಚ್ಚಾಗಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಂತಾಗಿದೆ. ಅನಾಹುತ ಸಾಧ್ಯತೆ ಹೆಚ್ಚಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
40 ವರ್ಷಗಳ ಹಿಂದಿನ ಕಿರಿದಾದ ದೇವಸ್ಯ ಸೇತುವೆ ಇನ್ನೂ ಅಭಿವೃದ್ಧಿ ಕಂಡಿಲ್ಲ. 4 ಟ್ರಿಪ್ ಖಾಸಗಿ ಬಸ್‌ಗಳ ಓಡಾಟವಿದೆ. ಶಾಲಾ ಬಸ್‌ಗಳು, ಕೆಂಪುಕಲ್ಲು ಸಾಗಾಟ ಲಾರಿಗಳು, ಪಿಕಪ್ ವಾಹನಗಳು ದಿನನಿತ್ಯ ಓಡಾಡುತ್ತಿದ್ದು, ಕೇರಳ ಗಡಿಭಾಗದ ಶಾಲಾ ವಿದ್ಯಾರ್ಥಿಗಳು ಹೆಚ್ಚಾಗಿ ಕರ್ನಾಟಕದ ವಿದ್ಯಾಸಂಸ್ಥೆಗಳನ್ನೇ ಅವಲಂಬಿಸಿಕೊಂಡಿದ್ದಾರೆ. ಸೇತುವೆ ಬದಿಯ ರಸ್ತೆ ಭಾಗ ಕುಸಿಯತೊಡಗಿದ್ದು, ಕೆಳಭಾಗದ ಕಲ್ಲುಗಳು ಕಳಚಿ ಬೀಳುತ್ತಿವೆ. ತಡೆಗೋಡೆಯೂ ಕುಸಿದಿದೆ. ಸಂಬಂಧಪಟ್ಟವರು ಕೂಡಲೇ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಸೇತುವೆ ಕುಸಿದು ಸಂಪರ್ಕವಿಲ್ಲದ ಸ್ಥಿತಿ ನಿರ್ಮಾಣವಾಗಲಿದೆ.- ಆಶೀರ್ವಾದ್, ಸ್ಥಳೀಯ ನಿವಾಸಿ ಗಡಿಪ್ರದೇಶವಾದ ದೇವಸ್ಯ ಎಂಬಲ್ಲಿರುವ ಸೇತುವೆ ತೀರಾ ಹಳೆಯದ್ದಾಗಿದ್ದು, ಪ್ರಸ್ತುತ ಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸುತ್ತೇನೆ.-ಸಂದೀಪ್‌ಪೂಜಾರಿ, ಜಿಲ್ಲಾ ಪಂಚಾಯಿತಿ ಇಂಜಿನಿಯರ್ https://www.vijayavani.net/district-administration-welcome-cm-at-airport