ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆ ಬಟ್ಟಪಾಡಿಗೆ ಭೇಟಿ ನೀಡಿ ಸಿಎಂ ಭರವಸೆ

mng--1 Aug ullala 2
Published on

ಮಂಗಳೂರು: ಉಳ್ಳಾಲ, ಸೋಮೇಶ್ವರ ಕಡಲ ತೀರಗಳಲ್ಲಿ ಪ್ರತಿ ಮಳೆಗಾಲದಲ್ಲಿ ಕಡಲ್ಕೊರೆತ ಉಂಟಾಗುತ್ತಿದ್ದು, ಇದರ ತಡೆಗೆ ಶಾಶ್ವತ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.


ಸೋಮೇಶ್ವರದ ಕಡಲ್ಕೊರೆತ ಪ್ರದೇಶ ಬಟ್ಟಪಾಡಿಗೆ ಮಂಗಳವಾರ ಭೇಟಿ ನೀಡಿದ ಅವರು ಹಾನಿಯ ವೀಕ್ಷಣೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.


ಕಡಲ್ಕೊರೆತದಿಂದ ಬಟ್ಟಪಾಡಿಯಲ್ಲಿ ಮನೆಗಳೆಲ್ಲ ಹಾನಿಗೀಡಾಗಿವೆ. ಕಳೆದ ವರ್ಷ ಮಾತ್ರವಲ್ಲ ಈ ವರ್ಷವೂ ಇಲ್ಲಿ ಕಡಲ್ಕೊರೆತ ಆಗಿದೆ. ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕು. ನಾವೆಲ್ಲ ತಾತ್ಕಾಲಿಕವಾಗಿ ಕಲ್ಲು ಹಾಕಿದರೂ ಮತ್ತೆ ಕೊರೆತ ಆಗುತ್ತಲೇ ಇದೆ. ಸಮುದ್ರ ನೀರು, ಅಲೆ ಜಾಸ್ತಿಯಾದಾಗ ಕೊರೆತ ಆಗುತ್ತಲೇ ಇರುತ್ತದೆ. ಉಡುಪಿ, ಮಂಗಳೂರು ಮತ್ತು ಕಾರವಾರ ಈ ಮೂರು ಜಿಲ್ಲೆಗಳಲ್ಲಿ ಈ ಸಮಸ್ಯೆ ಇದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡುತ್ತೇವೆ. ಕಡಲ್ಕೊರೆತದಿಂದ ಸಂಕಷ್ಟಕ್ಕೆ ಒಳಗಾದ ಮೀನುಗಾರರಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದರು.


ಇದಕ್ಕೂ ಮುನ್ನ ಸ್ಪೀಕರ್ ಯು.ಟಿ.ಖಾದರ್, ಕಳೆದ ಎರಡು ವರ್ಷಗಳಿಂದ ಬಟ್ಟಪಾಡಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಕಡಲ್ಕೊರೆತ ಉಂಟಾಗಿ ಹಾನಿಯಾಗುತ್ತಿದೆ. ಈ ಬಾರಿ ಜುಲೈನಲ್ಲಿ ಸುರಿದ ಮಳೆಗೆ ಕಡಲ್ಕೊರೆತ ತೀವ್ರಗೊಂಡಿದ್ದು, ಸುಮಾರು 20ಕ್ಕೂ ಅಧಿಕ ಮನೆಗಳು ಸಮುದ್ರ ಪಾಲಾಗಿದೆ. ಮಳೆಗಾಲಕ್ಕೂ ಮುನ್ನ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ಕಡಲ್ಕೊರೆತ ತಡೆಗೆ ಯೋಜನೆ ರೂಪಿಸಲಾಗಿದೆ. ಅದಕ್ಕೂ ಮುನ್ನವೇ ಮಳೆಗಾಲದಲ್ಲಿ ವಿಪರೀತ ಮಳೆಗೆ ಸಮುದ್ರ ನೀರು ಉಕ್ಕಿ ಹರಿದು ಮನೆಗಳಿಗೆ ಹಾಗೂ ಕೃಷಿ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗುತ್ತಿದೆ. ಕಡಲ ತೀರಗಳಿಗೆ ಬಂಡೆ ಕಲ್ಲುಗಳನ್ನು ಹಾಕಿದರೂ ಕೊರೆತ ಕಡಿಮೆಯಾಗುತ್ತಿಲ್ಲ. ಇದಕ್ಕೆ ಶಾಶ್ವತ ಪರಿಹಾರದ ಅಗತ್ಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.


ಸ್ಥಳೀಯರು ಸಿಎಂ ಅವರನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಸರ್ಕಾರದ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಎಡಿಜಿಪಿ ಕಾನೂನು, ಸುವ್ಯವಸ್ಥೆ ಹಿತೇಂದ್ರ ಪ್ರಸಾದ್, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಎಲ್.ಕೆ. ಅತೀಕ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net