

ವಿಜಯವಾಣಿ ಸುದ್ದಿಜಾಲ ಶಿರಸಿ
ಸೇತುವೆ ಕಾಮಗಾರಿ ಆರಂಭಿಸದೇ ಇದ್ದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ತಾಲೂಕಿನ ಗುಡ್ನಾಪುರ ಗ್ರಾಮದ ಅಜ್ಜರಣಿ ಹಾಗೂ ಮತಗುಣಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಬ್ಯಾನರ್ ಒಂದನ್ನು ಬರೆಸಿ ಹಾಕಿರುವ ಗ್ರಾಮಸ್ಥರು, ಅದರಲ್ಲಿ `ಸೇತುವೆ ಇಲ್ಲದೇ 3 ವರ್ಷಗಳಿಂದ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಿ, ಶೀಘ್ರವೇ ಸೇತುವೆ ಆರಂಭಿಸಬೇಕು' ಇಲ್ಲದಿದ್ದಲ್ಲಿ ಎರಡು ಗ್ರಾಮಸ್ಥರಿಂದ 2023 ರ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ' ಎಂದು ಎಚ್ಚರಿಸಿದ್ದಾರೆ.
ಸಮಸ್ಯೆ ಏನು..?
ಗ್ರಾಮದ ಅಜ್ಜರಣಿ ಸೇತುವೆ ಶಿಥಿಲವಾಗಿತ್ತು. ಸೇತುವೆ ಕಾಮಗಾರಿಗೆ ನಾಲ್ಕು ವರ್ಷಗಳ ಹಿಂದೆಯೇ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ನಂತರ ಹಳೆಯ ಸೇತುವೆಯನ್ನು ಅರ್ಧ ತೆರವು ಮಾಡಿದ್ದು, ಕಾಮಗಾರಿ ಅಷ್ಟಕ್ಕೇ ನಿಂತಿದೆ. ಕಾಮಗಾರಿ ನಿಂತು ಮೂರು ವರ್ಷ ಕಳೆದರೂ ಕ್ರಮವಾಗಿಲ್ಲ. ಮಳೆಗಾಲದಲ್ಲಿ ಶಿಥಿಲ ಸೇತುವೆ ಮುಳುಗಡೆಯಾಗುತ್ತದೆ. ಗ್ರಾಮದ ಮಕ್ಕಳು 8 ಕಿಮೀ ಸುತ್ತಿ ಗುಡ್ನಾಪುರಕ್ಕೆ ಬರಬೇಕಾಗುತ್ತದೆ. ಎರಡು ವರ್ಷಗಳಿಂದ ನಾವು ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದ್ದೇವೆ. ಇದರಿಂದ ಶೀಘ್ರ ಸೇತುವೆ ಕಾಮಗಾರಿ ಪ್ರಾರಂಭಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.