ಹಾಡುಹಗಲೇ ಕಾರಿನ ಗಾಜು ಹೊಡೆದು 4.30 ಲಕ್ಷ ರೂ., ದೋಚಿದ ಕಳ್ಳರು

crime
Published on

ತುಮಕೂರು: ಹಾಡಹಗಲೇ ಕಾರಿನ ಗಾಜು ಹೊಡೆದು 4.30 ಲಕ್ಷ ರೂ., ದೋಚಿರುವ ಪ್ರಕರಣ ತಿಲಕ್‌ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗೃಹ ಸಚಿವರ ಒಡೆತನ ಕಾಲೇಜಿನಲ್ಲಿ ಘಟಿಕೋತ್ಸವ ಬಂದೋಬಸ್ತ್, ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ‘ಬ್ಯುಸಿ’ ಇದ್ದಾಗಲೇ ಈ ಘಟನೆ ನಡೆದಿದೆ.

ನಗರದ ರೈಲ್ವೆ ನಿಲ್ದಾಣದ ರಸ್ತೆಯ ಶ್ರೀ ಉಡುಪಿ ಕೃಷ್ಣ ಭೋಜನಾಲಯ ಬಳಿ ಬುಧವಾರ ಮಧ್ಯಾಹ್ನ 1.30ರಲ್ಲಿ ವೈನ್ ಸ್ಟೋರ್ ಮಾಲೀಕ ಗೋಪಾಲ್ ಎಂಬುವರ ಕಾರಿನ ಕಿಟಕಿ ಗಾಜು ಹೊಡೆದು 4.30 ಲಕ್ಷ ರೂ.,ಗಳನ್ನು ಲಪಟಾಯಿಸಿರುವ ಖದೀಮರಿಬ್ಬರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ.

ಊಟಕ್ಕೆ ಕುಳಿತಾಗ ಕಳ್ಳರ ಕೈಚಳಕ : ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದ ಪಕ್ಕದ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮಧ್ಯಾಹ್ನ 1 ಗಂಟೆಗೆ 2.30 ಲಕ್ಷ ರೂ., ಡ್ರಾ ಮಾಡಿದ್ದ ಗುಬ್ಬಿ ತಾಲೂಕು ಮಾವಿನಹಳ್ಳಿಯ ಗೋಪಾಲ್‌ರನ್ನು ಹಿಂಬಾಲಿಸಿದ್ದ ಕಳ್ಳರು ರೈಲ್ವೆ ಸ್ಟೇಷನ್‌ಬಳಿಯ ಕೃಷ್ಣ ಭೋಜನಾಲಯದಲ್ಲಿ ಊಟಕ್ಕೆ ನಿಲ್ಲಿಸಿದ್ದಾಗ ಕೈಚಳ ತೋರಿದ್ದಾರೆ. ಬ್ಯಾಂಕ್‌ನಲ್ಲಿ ಬಿಡಿಸಿಕೊಂಡಿದ್ದ 2.30 ಲಕ್ಷ ರೂ., ಜತೆಗೆ ಸ್ನೇಹಿತರು ಕೊಟ್ಟಿದ್ದ 2 ಲಕ್ಷ ರೂ., ಸೇರಿ ಒಟ್ಟು 4.30 ಲಕ್ಷ ರೂ., ಗಳನ್ನು ಕಳ್ಳರು ದೋಚಿದ್ದಾರೆ.

ತಿಲಕ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಬಕಾರಿ ಉಪ ಅಧೀಕ್ಷಕರ ಕಚೇರಿಗು ಹೋಗಿದ್ದ ಗೋಪಾಲ್
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಣ ಬಿಡಿಸಿಕೊಂಡಿದ್ದ ಗೋಪಾಲ್‌ರನ್ನು ಬೈಕ್‌ನಲ್ಲಿ ಹಿಂಬಾಲಿಸಿದ ಕಳ್ಳರು, ಅವರು ಹೋದ ಕಡೆಯಲ್ಲಾ ಫಾಲೋ ಮಾಡಿದ್ದಾರೆ. ಮಾವಿನಹಳ್ಳಿಯ ಸಂಜೀವಿನಿ ವೈನ್ ಸ್ಟೋರ್ ಸ್ಥಳಾಂತರಕ್ಕೆ ಅನುಮತಿ ಪಡೆಯುವ ಸಂಬಂಧ ಅಬಕಾರಿ ಅಧಿಕಾರಿಯೊಬ್ಬರನ್ನು ಭೇಟಿ ಮಾಡಲು ಗಾಂಧಿನಗರದ ಅಬಕಾರಿ ಅಧೀಕ್ಷಕರ ಕಚೇರಿಗೆ ಗೋಪಾಲ್ ಹೋಗಿದ್ದರು. ಈ ವೇಳೆ ಹತ್ತು ನಿಮಿಷದಲ್ಲಿ ಬರುವುದಾಗಿ ಅಧಿಕಾರಿ ಹೇಳಿದ್ದರಿಂದ ಅಷ್ಟರಲ್ಲಿ ಊಟ ಮುಗಿಸಿ ಬರಲು ಹೋಟೆಲ್‌ಗೆ ತೆರಳಿದ್ದಾಗ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net