

ಹಾಸನ: ಬೂವನಹಳ್ಳಿ ಬಳಿ ನಿರ್ಮಾಣ ಹಂತದಲ್ಲಿರುವ ಹಾಸನ ವಿಮಾನ ನಿಲ್ದಾಣದ ಸುತ್ತಲಿನ ರೈತರು ತಮ್ಮ ಜಮೀನುಗಳಿಗೆ ಹೋಗಿ ಬರಲು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ತಡೆಗೋಡೆ ಒಡೆದು ಸುಗಮ ದಾರಿ ಮಾಡಿಕೊಡಲು ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಐಡಿಬಿ) ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣದ ಆವರಣದಿಂದ ಹೊರಗೆ ನಿರ್ದಿಷ್ಟ ಬಫರ್ ವಲಯ ಮತ್ತು ಸರ್ವಿಸ್ ರಸ್ತೆ ಇರಬೇಕು. ಆದರೆ, ಹಾಸನ ವಿಮಾನ ನಿಲ್ದಾಣದ ನಿರ್ಮಾಣದಲ್ಲಿ ಈ ನಿಯಮ ಪಾಲನೆಯಾಗದೆ ರೈತರಿಗೆ ತೊಂದರೆ ಉಂಟಾಗಿದೆ. ರೈತರಿಗೆ ಬದಲಿ ದಾರಿ ಸಿಗುವವರೆಗೂ ಕಾಂಪೌಂಡ್ ತೆಗೆಯಲು ಕ್ರಮ ಕೈಗೊಳ್ಳಬೇಕು. ಮುಂದಿನ ಸೋಮವಾರದೊಳಗೆ ಈ ಬಗ್ಗೆ ಸ್ಪಷ್ಟ ವರದಿ ನೀಡಬೇಕು ಎಂದು ಉಪವಿಭಾಗಾಧಿಕಾರಿ ಜಗದೀಶ್ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಕೆಐಡಿಬಿ ಅಧಿಕಾರಿಗಳು 1966ರಿಂದ ನಡೆದ ಭೂಸ್ವಾಧೀನದ ಪ್ರಕ್ರಿಯೆಯ ವಿವರ ನೀಡಿದರು. ಒಟ್ಟು 12 ಕಿಲೋ ಮೀಟರ್ ಉದ್ದದ ಗೋಡೆ ನಿರ್ಮಾಣಕ್ಕೆ ಯೋಜನೆ ಇದ್ದರೂ, ಸ್ವಾಧೀನದ ಗೊಂದಲಗಳಿಂದ 6 ಕಿ.ಮೀ. ಮಾತ್ರ ನಿರ್ಮಾಣವಾಗಿದೆ ಎಂದು ಗುತ್ತಿಗೆದಾರರು ತಿಳಿಸಿದರು.
ಬೂವನಹಳ್ಳಿ, ದ್ಯಾವಲಾಪುರ, ಮೈಲನಹಳ್ಳಿ, ತೆಂಡಿಹಳ್ಳಿ ಹಾಗೂ ಲಕ್ಷ್ಮೀ ಸಾಗರದ ರೈತರು ತಮ್ಮ ಭೂಮಿಯ ಹಕ್ಕು, ಪರಿಹಾರ, ಹಾಗೂ ದಾರಿ ಮುಚ್ಚಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಕೆಲ ಭೂಮಿಗಳು ತಪ್ಪಾಗಿ ಸರ್ಕಾರಿ ಭೂಮಿಯಾಗಿ ದಾಖಲಾಗಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ವಿ.ಮಂಜುನಾಥ್, ತಹಸೀಲ್ದಾರ್ ಗೀತಾ, ಆರ್.ಪಿ.ವೆಂಕಟೇಶಮೂರ್ತಿ, ರೈತರು ಇದ್ದರು.