

ಬೆಂಗಳೂರು: ನಗರದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಮೂಲಕ ನೀರಿನ ಸಮಸ್ಯೆಯನ್ನು ಕಡಿಮೆ ಮಾಡಲು ಸೂಕ್ತ ಯೋಜನೆಯನ್ನು ರೂಪಿಸಬೇಕಿದೆ ಎಂದು ಜಲಸುರಕ್ಷಾ ಬೆಂಗಳೂರಿನ ನೋಡಲ್ ಅಧಿಕಾರಿ ಕೆ.ಎನ್ ರಾಜೀವ್ ತಿಳಿಸಿದರು.
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 'ಜಲಸುರಕ್ಷಾ/ತೃಪ್ತಿಕರ ಬೆಂಗಳೂರು' ವಿಷಯಕ್ಕೆ ಸಂಬಂಧಿಸಿದಂತೆ ದಯಾನಂದ ಸಾಗರ್ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ನಾಗರಿಕರಿಂದ ಬಂದಂತಹ 9,000ಕ್ಕೂ ಹೆಚ್ಚು ಸಲಹೆಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಬೆಂಗಳೂರು ನಗರದಾದ್ಯಂತ ಜಲಮಂಡಳಿ ವತಿಯಿಂದ ನೀರಿನ ಸರಬರಾಜು ಮಾಡಲಾಗುತ್ತಿದೆ. ಅದರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಜಲಮಂಡಳಿಯು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರು ಜನರಿಗೆ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ದಿನದ 24 ಗಂಟೆಯೂ ಜಲಮಂಡಳಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ನಗರದಲ್ಲಿ ಹೆಚ್ಚಾಗಿ ಕಾವೇರಿ ನೀರಿನ ಮೇಲೆ ಅವಲಂಭಿತರಾಗಿದ್ದು, ಪರ್ಯಾಯ ವ್ಯವಸ್ಥೆಗಳಿಗೆ ನಾವು ಮುಂದಾಗಬೇಕಿದೆ. ಜನಗರಿಗೆ ಗುಣಮಟ್ಟ ನೀರನ್ನು ನೀಡುವ ಸಲುವಾಗಿ ರಿಯಲ್ ಟೈಮ್ ಆನ್ಲೈನ್ ನೀರಿನ ಗುಣಮಟ್ಟ ಮಾನಿಟರಿಂಗ್ ಸ್ಟೇಷನ್ಗಳ ಮೂಲಕ ಮೇಲ್ವಿಚರಾಣೆ ಮಾಡಲಾಗುತ್ತದೆ ಎಂದು ಹೇಳಿದರು.
ದಯಾನಂದ ಸಾಗರ್ ತಾಂತ್ರಿಕ ಮಹಾವಿದ್ಯಾಲಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ರಾಮರಾಜು, ಜಲಮಂಡಳಿಯ ಮುಖ್ಯ ಅಭಿಯಂತರ ವೆಂಕಟೇಶ್, ಸುರೇಶ್, ಜಲಮಂಡಳಿ ಅಧಿಕಾರಿಗಳು, ದಯಾನಂದ ಸಾಗರ್ ಕಾಲೇಜು ಪ್ರಾಧ್ಯಾಪಕರು, ಜಲ ತಜ್ಞರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.