ಮೌಢ್ಯ ತೊಲಗಿಸಿದ ಬ್ರಹ್ಮಶ್ರೀ ನಾರಾಯಣ ಗುರೂಜಿ

ಗೌರಿಬಿದನೂರಿನ ಡಾ.ಎಚ್.ಎನ್.ಕಲಾ ಭವನದಲ್ಲಿ ತಾಲೂಕು ಆರ್ಯ ಈಡಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರೂಜಿ ಅವರ 170ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಸಂಘದ ಅಧ್ಯಕ್ಷ ವಿಜಯ್ ರಾಕಲ್ ಚಂದ್, ಗೌರವಾಧ್ಯಕ್ಷ ಜಿ.ಎನ್.ನಾಗರಾಜ್ ಇತರರು ಇದ್ದರು.
2
ಗೌರಿಬಿದನೂರಿನ ಡಾ.ಎಚ್.ಎನ್.ಕಲಾ ಭವನದಲ್ಲಿ ತಾಲೂಕು ಆರ್ಯ ಈಡಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರೂಜಿ ಅವರ 170ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಸಂಘದ ಅಧ್ಯಕ್ಷ ವಿಜಯ್ ರಾಕಲ್ ಚಂದ್, ಗೌರವಾಧ್ಯಕ್ಷ ಜಿ.ಎನ್.ನಾಗರಾಜ್ ಇತರರು ಇದ್ದರು.
Published on

ಅಜ್ಞಾನ, ಅಂಧಕಾರ ನಿರ್ಮೂಲನೆ ಹರಿಕಾರ - ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬಣ್ಣನೆ


ಗೌರಿಬಿದನೂರು: ವಿಚಾರಗಳ ಮೂಲಕವೇ ಸಮಾಜದ ಪರಿವರ್ತನೆಗೆ ಕಾರಣರಾದವರು ಬ್ರಹ್ಮಶ್ರೀ ನಾರಾಯಣ ಗುರು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬಣ್ಣಿಸಿದರು.
ನಗರದ ಡಾ.ಎಚ್.ಎನ್.ಕಲಾ ಭವನದಲ್ಲಿ ಭಾನುವಾರ ತಾಲೂಕು ಆರ್ಯ ಈಡಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರೂಜಿ ಅವರ 170ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶತಮಾನದ ಹಿಂದೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಜನರಿಗೆ ನ್ಯಾಯ ದೊರಕಿಸಿಕೊಟ್ಟವರು ನಾರಾಯಣ ಗುರುಗಳು. ಅವರ ವಿಚಾರಗಳನ್ನು ಮುಂದಿನ ಪೀಳಿಗೆಗೂ ತಲುಪಿಸುವ ಕೆಲಸವಾಗಬೇಕು ಎಂದರು.
ಬ್ರಹ್ಮಶ್ರೀ ನಾರಾಯಣ ಗುರು, ಬಹುದೊಡ್ಡ ತತ್ವಜ್ಞಾನಿಯಾಗಿ ಸಮಾಜ ಸುಧಾರಕರಾಗಿದ್ದರು.ಅಂಧಕಾರ, ಜಾತಿ ಪದ್ಧತಿ ತುಂಬಿದ್ದ ಕಾಲದಲ್ಲಿ ವಿದ್ಯೆ ಕಲಿಯುವುದು ಅಪರಾಧವಾಗಿತ್ತು. ಸಂಸ್ಕೃತ ಜ್ಞಾನ ಭಂಡಾರವಾಗಿತ್ತು. ಅದನ್ನು ಕೇವಲ ಮೇಲ್ಜಾತಿಯವರಿಗೆ ಮಾತ್ರ ಕಲಿಸಲಾಗುತ್ತಿತ್ತು. ಅಂತಹ ಕಾಲಘಟ್ಟದಲ್ಲಿ ನಾರಾಯಣ ಗುರುಗಳು ಸಂಸ್ಕೃತದ ಹಲವು ಗ್ರಂಥಗಳನ್ನು ರಚಿಸಿ, ಗುರುಕುಲಗಳನ್ನು ಸ್ಥಾಪಿಸಿ, ಜನರಿಗೆ ಶಿಕ್ಷಣ ನೀಡಿದರು ಎಂದರು.
ಜಾತಿ ಪದ್ಧತಿಯಿಂದ ಅವಮಾನಕ್ಕೊಳಗಾಗಿದ್ದ ಜನರಿಗೆ ಧೈರ್ಯ ತುಂಬಿದರು. ಮೌಢ್ಯ ತೊರೆಯಬೇಕು, ಮಾನವರೆಲ್ಲ ಒಂದೇ ಎಂದು ದೇಶಕ್ಕೆ ಸಾರಿ ಹೇಳಿ ವಿಶ್ವ ಮಾನವರಾದರು. ಇಂತಹ ಮಹಾನ್ ಪುರುಷರ ತತ್ವ ಆದರ್ಶಗಳನ್ನು ಪಾಲಿಸಿದರೆ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು ಎಂದರು.
ತಾಲೂಕು ಆರ್ಯ ಈಡಿಗರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ವಿಜಯ್ ರಾಕಲ್ ಚಂದ್ ಮಾತನಾಡಿ, ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವಲ್ಲಿ ನಾರಾಯಣ ಗುರುಗಳು ನಡೆಸಿದ ಹೋರಾಟ ಸ್ಮರಣೀಯ. ನಾವೆಲ್ಲರೂ ಗುರುಗಳ ಸಂದೇಶವನ್ನು ಜೀವನದುದ್ದಕ್ಕೂ ಪಾಲಿಸೋಣ ಎಂದರು. ಮುಖಂಡ ಪ್ರಸಾದ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರು ದೇಶದಲ್ಲಿ, ಶಾಂತಿಯಿಂದ ಕ್ರಾಂತಿ ಸೃಷ್ಟಿಸಿದವರು. ಕೇರಳದಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಬಡತನ ಹಾಗೂ ಅನಿಷ್ಟ ಪದ್ಧತಿಗಳನ್ನು ಅಳಿಸಿ ಹಾಕಿ ಜನರ ಆತ್ಮಾಭಿಮಾನ ಹೆಚ್ಚಿಸಿದ ಮಹಾನ್ ವ್ಯಕ್ತಿಯಾಗಿದ್ದರು. ಎಲ್ಲ ಧರ್ಮಗಳನ್ನು ಗೌರವಿಸುತ್ತಿದ್ದರು. ಮಕ್ಕಳಿಗೆ ಮದುವೆ ಮಾಡಲು ದುಂದು ವೆಚ್ಚ ನಿಲ್ಲಿಸಬೇಕು ಎಂದು ತಿಳಿ ಹೇಳಿದ ಮಹಾನ್ ದಾರ್ಶನಿಕ ನಾರಾಯಣ ಗುರೂಜಿ ಎಂದರು.
ಆರ್ಯ ಈಡಿಗರ ಸಂಘದ ಗೌರವಾಧ್ಯಕ್ಷ ಜಿ.ಎನ್.ನಾಗರಾಜ್ ಮಾತನಾಡಿ, ನಮ್ಮ ಸಮಾಜದ ಅಸ್ತಿತ್ವಕ್ಕೋಸ್ಕರ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಉತ್ತಮ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಗರಸಭೆ ಅಧ್ಯಕ್ಷ ಲಕ್ಷ್ಮೀ ನಾರಾಯಣಪ್ಪ, ಮುಖಂಡರಾದ ಸೂರಜ್, ಕಾಂಗ್ರೆಸ್ ಮುಖಂಡ ಮಂಜುನಾಥ್, ವೆಂಕಟರಮಣಪ್ಪ ಹಾಗೂ ಸಮುದಾಯದ ಮುಖಂಡರು ಇದ್ದರು.

ಸಮಾಜಕ್ಕೆ ಆರ್ಯ ಈಡಿಗ ಸಮುದಾಯದ ಕೊಡುಗೆ ಅಪಾರ
ಈಡಿಗ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಬೇಕು. ಈ ಸಮುದಾಯದವರು ರಾಜ್ಯಕ್ಕೆ ಚಲನಚಿತ್ರ, ವೈದ್ಯಕೀಯ, ರಾಜಕೀಯ, ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಿ ಹಲವು ಕೊಡುಗೆಗಳನ್ನು ನೀಡಿದ್ದಾರೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net