ಬ್ರಹ್ಮಣೀಪುರ ಒಡಲಾಳದಲ್ಲಿದೆ ವಿಶಿಷ್ಟ ಇತಿಹಾಸ

1003736194
Published on

* ಬ್ರಹ್ಮಣ್ಯತೀರ್ಥರಿಗೂ ಗ್ರಾಮಕ್ಕೂ ಅವಿನಾಭಾವ ಸಂಬಂಧ

* ರಾಜಮನೆತನಗಳು ಮಹೀಮರ ಕೃಪಾರ್ಶೀವಾದ ಪಡೆದಿರುವ ಸಾಕ್ಷಿ ದಾಖಲು

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಪ್ರಾಚೀನ ಕಾಲದಲ್ಲಿ ಜ್ಞಾನಮಂಟಪ ಕ್ಷೇತ್ರ ಎಂದು ಕರೆಯಲ್ಪಡುತ್ತಿದ್ದ ಚನ್ನಪಟ್ಟಣ ತಾಲೂಕಿಗೆ ವಿಶಿಷ್ಟ ಇತಿಹಾಸವಿದೆ. ಹಲವು ಗ್ರಾಮಗಳು ಸಾಕಷ್ಟು ಪುರಾವೆಗಳಿಗೆ ಸಾಕ್ಷಿಯಾಗಿವೆ. ಅಂತೆಯೇ, ತಾಲೂಕಿನ ಬ್ರಹ್ಮಣೀಪುರದ ಐತಿಹ್ಯವೂ ವಿಶಿಷ್ಟವಾಗಿದೆ.

ಹೌದು... ಚನ್ನಪಟ್ಟಣ ನಗರದಿಂದ 4 ಕಿಮೀ ದೂರವಿರುವ ಬ್ರಹ್ಮಣೀಪುರ ತಾಲೂಕಿನ ಪ್ರಮುಖ ಗ್ರಾಮಗಳಲ್ಲೊಂದು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ಗ್ರಾಮ ವಿವಿಧ ಕಾರಣಗಳಿಂದ ತಾಲೂಕಿನಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಈ ಹಿಂದೆ ಬ್ರಾಹ್ಮಣರು ಅತಿ ಹೆಚ್ಚಾಗಿ ವಾಸಿಸುತ್ತಿದ್ದರು ಎನ್ನಲಾಗಿದ್ದು, ಸದ್ಯ ಒಕ್ಕಲಿಗರು, ದಲಿತರು, ಕೊರಮರು, ವಿಶ್ವಕರ್ಮ, ಬ್ರಾಹ್ಮಣ ಸೇರಿ ಹಲವು ಜಾತಿ ಜನಾಂಗದವರು ಸಹಬಾಳ್ವೆಯ ಜೀವನ ನಡೆಸುತ್ತಿದ್ದಾರೆ. ಲಕ್ಷ್ಮೀದೇವಿ ಗ್ರಾಮ ದೇವತೆಯಾಗಿ ಗ್ರಾಮವನ್ನು ಕಾಯ್ದು ಕಾಪಾಡುತ್ತಿದ್ದು, ಗ್ರಾಮದಲ್ಲಿ ನೆಲೆನಿಂತಿರುವ ವೀರಾಂಜನೇಯ ಗ್ರಾಮದ ಗತ ಇತಿಹಾಸಕ್ಕೆ ಸಾಕ್ಷಿಯಾಗಿದ್ದಾನೆ.

500ಕ್ಕೂ ಹೆಚ್ಚಿನ ಮನೆಗಳು ಹಾಗೂ 2500ಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಈ ಗ್ರಾಮ ತಗಚಗೆರೆ ಗ್ರಾಪಂ ವ್ಯಾಪ್ತಿಗೆ ಸೇರಿದ್ದು, ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಆಸ್ಪತ್ರೆ, ಬ್ಯಾಂಕ್, ಎಂಪಿಸಿಎಸ್, ವಿಎಸ್‌ಎಸ್‌ಎನ್ ಸೇರಿ ಹಲವು ಸವಲತ್ತುಗಳನ್ನು ಒಳಗೊಂಡಿದೆ. ಈ ಗ್ರಾಮ ಮೂಲದವರು ಹಲವರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಗ್ರಾಮದ ಕೀರ್ತಿ ಪಸರಿಸಿದ್ದಾರೆ. ಕೃಷಿ, ಹೈನುಗಾರಿಕೆ ಹಾಗೂ ರೇಷ್ಮೆ ಇಲ್ಲಿನವರ ಮುಖ್ಯ ಕಸುಬಾಗಿದೆ.

ಪವಿತ್ರ ಪುಣ್ಯಭೂಮಿ

ಭಾರತದ ನಾಲ್ಕು ಮೂಲೆಗಳಿಗೂ ದ್ವೈತ ಸಿದ್ಧಾಂತ ಹರಡಲು ಕಾರಣರಾದ ಹಾಗೂ ಶ್ರೀ ವ್ಯಾಸರಾಜ ಗುರುಸಾರ್ವಭೌಮರನ್ನು ಈ ಜಗತ್ತಿಗೆ ನೀಡಿದ ಕೀರ್ತಿ ಹೊಂದಿರುವ ಶ್ರೀ ಬ್ರಹ್ಮಣ್ಯ ತೀರ್ಥರಿಗೂ ಈ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ. ಸೂರ್ಯದೇವನ ಅಂಶಜರಾದ ಬ್ರಾಹ್ಮಣ್ಯತೀರ್ಥರ ಪವಾಡಗಳು ಹಾಗೂ ಮಹಿಮೆಗಳು ಅಪಾರ. ಹಲವು ರಾಜಮನೆತನಗಳು ಇಂತಹ ಮಹೀಮರ ಕೃಪಾರ್ಶೀವಾದ ಪಡೆದಿರುವ ಸಾಕ್ಷಿಗಳು ಇತಿಹಾಸದ ಪುಟದಲ್ಲಿ ದಾಖಲಾಗಿದೆ. ತಿಮ್ಮರಸು ಎಂಬ ರಾಜ ಅರ್ಧರಾಜ್ಯವನ್ನೇ ಬ್ರಹ್ಮಣ್ಯತೀರ್ಥರಿಗೆ ಕೊಡಬೇಕೆಂದು

ನಿರ್ಧರಿಸಿದಾಗ ಬ್ರಹ್ಮಣ್ಯ ತೀರ್ಥರೇ ಅದನ್ನು ನಿರಾಕರಿಸಿದರು. ನಂತರದ ದಿನಗಳಲ್ಲಿ ಕೃಷ್ಣದೇವರಾಯ ಬ್ರಹಣ್ಯತೀರ್ಥರ ಶಿಷ್ಯ ವ್ಯಾಸರಾಜರಿಗೆ ಗುರುಗಳ ಕಾಣಿಕೆ ಎಂದು 32 ಗ್ರಾಮಗಳನ್ನೂ ಕೊಡಲು ಮುಂದೆ ಬರುತ್ತಾನೆ. ಆಗ ವ್ಯಾಸರಾಜರು ಈ ಗ್ರಾಮಗಳನ್ನು ಮೂವತ್ತೆರಡು ಪಂಡಿತರಿಗೆ ಕೊಟ್ಟು ಆ ಪೈಕಿ ಒಂದು ಗ್ರಾಮಕ್ಕೆ ಬ್ರಹ್ಮಣ್ಯಪುರ ಎಂದು ಹೆಸರಿಡುತ್ತಾರೆ. ಆ ಪವಿತ್ರ ಗ್ರಾಮವೇ ಇಂದಿನ ಬ್ರಹ್ಮಣೀಪುರ ಗ್ರಾಮ ಎನ್ನಲಾಗಿದೆ.

ವೀರಾಂಜನೇಯನ ನೆಲವೀಡು

ಈ ಹಿಂದಿನ ಕಾಲದಲ್ಲಿ ಚನ್ನಪಟ್ಟಣದ ಚಿಕ್ಕಗಂಗವಾಡಿ ರಾಜನು ನೀರಿಗಾಗಿ ಗ್ರಾಮದಲ್ಲಿ ಕೆರೆ ತೆಗೆಸುತ್ತಿದ್ದಾಗ ಒಂದು ದೊಡ್ಡ ಕಲ್ಲಿನ ಬಂಡೆ ಸಿಕ್ಕುತ್ತದೆ. ಬಂಡೆಯನ್ನು ಕದಲಿಸುವುದು ಅಸಾಧ್ಯವಾದಾಗ ಕೆರೆಯ ವಿಚಾರವನ್ನು ಕೈಚೆಲ್ಲಲಾಗುತ್ತದೆ. ಆ ವೇಳೆ ಶ್ರೀ ಬ್ರಹ್ಮಣ್ಯತೀರ್ಥರಿಗೆ ಈ ವಿಷಯ ತಿಳಿದು ಬಂಡೆಯನ್ನು ತೀರ್ಥಪ್ರೋಕ್ಷಣೆೆಯಿಂದ ಭೇದಿಸುತ್ತಾರೆ. ಆ ವೇಳೆ ಹನುಮಂತದೇವರ ಮೂರ್ತಿ ದೊರೆಯುತ್ತದೆ. ಮೂರೂವರೆ ಆಡಿ ಎತ್ತರವಿರುವ ಶಿಲಾಮಯ ಮೂರ್ತಿ ಬಹಳ ಸುಂದರವಾಗಿದ್ದು, ಸಿಂಹಾವಳಿಯ ಕೆಳಗೆ ಸೀತಾ, ರಾಮ, ಲಕ್ಷ್ಮಣ ದೇವರನ್ನು

ತಲೆಯಮೇಲಿರಿಸಿಕೊಂಡಿರುವ ದಾಪುಗಾಲಿಡುವ ಹನುಮಂತನ ಮೂರ್ತಿ ಬಲಹಸ್ತದಲ್ಲಿ ಅಭಯವನ್ನೂ ಎಡ ಹಸ್ತದಲ್ಲಿ ಸೌಗಂಧಿಕಾ ಪುಷ್ಪವನ್ನು ಹಿಡಿದಿದೆ. ಬಾಲದಲ್ಲಿ ಘಂಟೆಯನ್ನು ಧರಿಸಿರುವ ಮತ್ತು ಶಿರದ ಶಿಖೆಯ ಗಂಟು ವಿಶಿಷ್ಟವಾಗಿವೆ. ಈ ಮೂರ್ತಿ ಬಹಳ ವಿಶಿಷ್ಟವಾಗಿದ್ದು, ಮಧ್ವ ಯತಿತ್ರಯರಾದ ಶ್ರೀ ಬ್ರಹ್ಮಣ್ಯ ತೀರ್ಥರು, ಶ್ರೀ ಪಾದರಾಜರು ಮತ್ತು ಶ್ರೀ ವ್ಯಾಸರಾಜರಿಂದ ಪ್ರತಿಷ್ಠಿತವಾಗಿರುವುದು ಇದರ ವಿಶೇಷ.

ಇಂದಿಗೂ ವಿವಿಧ ಭಾಗಗಳಿಂದ ಗ್ರಾಮಕ್ಕೆ ಬರುವ ಭಕ್ತರು ಬ್ರಹ್ಮಣ್ಯತೀರ್ಥರ ಅರಾಧನೆ ಮಾಡುತ್ತಾರೆ. ಬ್ರಹ್ಮಣ್ಯತೀರ್ಥರು ಹಾಗೂ ವ್ಯಾಸರಾಜರು ಗ್ರಾಮದಲ್ಲಿ ಕೆರೆ ಹಾಗೂ ಕೊಳ ನಿರ್ಮಿಸಿದ್ದು, ಈ ನೀರನ್ನು ಪ್ರೋಕ್ಷಣೆ ಮಾಡಿಕೊಂಡರೆ ರೋಗರುಜೀನ ವಾಸಿಯಾಗುತ್ತವೆ ಎಂಬ ನಂಬುಕೆಯಿದೆ. ಮಳೆ ಬರದಿದ್ದರೆ ಗ್ರಾಮದ ಪಕ್ಕದಲ್ಲಿರುವ ನರಸಿಂಹಸ್ವಾಮಿ ಬೆಟ್ಟಕ್ಕೆ (ಅಕಾಶವಾಣಿ ಗುಡ್ಡೆ) ತೆರಳಿ ಪೂಜೆ ಸಲ್ಲಿಸುವ ಪರಿಪಾಠವಿತ್ತು.

ಗ್ರಾಮದ ದಲಿತ ಸಮುದಾಯದವರು ಮಸಣಕಮ್ಮ ದೇವಿಯನ್ನು ಆರಾಧಿಸುತ್ತಾರೆ. ಈಗಲೂ ದೇವಿಯ ಹಬ್ಬವನ್ನು ವಾರಗಟ್ಟಲೇ ನಡೆಸುತ್ತಾರೆ. ಗ್ರಾಮದೇವತೆ ಲಕ್ಷ್ಮೀದೇವತೆ, ವೀರಾಂಜನೇಯ, ಅರಸಮ್ಮ, ಮಸಣಕಮ್ಮ, ಕಂಬದ ಮಾರಮ್ಮ ಸೇರಿ ಹಲವು ದೇವರನ್ನು ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿದ್ದಾರೆ. ಗ್ರಾಮದೇವತೆಯ ಕೊಂಡೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.

ಗುಹಾಂತರಿ ದೇವಾಲಯದ ವಿಶೇಷ

ಬ್ರಹ್ಮಣೀಪುರ ಗ್ರಾಮದ ಹೊರವಲಯದಲ್ಲಿ ಪ್ರಾಚೀನ ಕಾಲದ ಗುಹಾಂತರ ಮಾದರಿಯ ಶ್ರೀ ಕಾಳೇಶ್ವರ - ಶ್ರೀ ಗೂಳೇಶ್ವರ ಎಂಬ ದೇವಾಲಯಗಳಿರುವುದು ಜಿಲ್ಲೆಯ ವಿಶೇಷತೆಗಳಲ್ಲೊಂದು. ಈ ಎರಡು ದೇವಾಲಯಗಳು ಅಕ್ಕಪಕ್ಕಗಳಲ್ಲಿದ್ದು, ನೆಲ ಮಟ್ಟದಿಂದ ನಾಲ್ಕೈದು ಅಡಿಗಳಷ್ಟು ಆಳದಲ್ಲಿವೆ. ಕಾಳೇಶ್ವರ ಹಾಗೂ ಗೂಳೇಶ್ವರ ಉಬ್ಬು ಶಿಲಾ ಶಿಲ್ಪಗಳ ಜತೆಗೆ ರಾವಳೇಶ್ವರ (ರಾವಣಾಸುರ) ಮತ್ತು ಚತುರ್ಮುಖ ಬ್ರಹ್ಮನ ಶಿಲ್ಪಗಳಿವೆ. ಸುತ್ತಲೂ ಪರಿವಾರ ದೇವತೆಗಳ ವಿಗ್ರಹಗಳನ್ನು ಕಾಣಬಹುದು. ಇನ್ನೂ ದೇವರ ದೀಪ ಹಾಗೂ ಪಂಜುಗಳಿಗೆ ಕೇವಲ ಎಳ್ಳೆಣ್ಣೆಯನ್ನು ಮಾತ್ರವೇ ಉಪಯೋಗಿಸುತ್ತಾರೆ. ತೆಂಗಿನ ಕಾಯಿ ಒಡೆಯುವುದಿಲ್ಲ. ದೇವರಿಗೆ ಹೊಸ ವಸ ತೊಡಿಸುವುದು, ತಮಟೆ ಅಥವಾ ಮಂಗಳ ವಾದ್ಯದ ಶಬ್ಧ ನಿಷಿದ್ಧ. ದೇವರ ಅಲಂಕಾರಕ್ಕೆ ಬಿಡಿ

ಹೂಗಳನ್ನು ಮಾತ್ರವೇ ಬಳಸುತ್ತಾರೆ. ಬಾಳೆ ಹಣ್ಣು ಮತ್ತು ವೀಳ್ಯದೆಲೆ ತೊಟ್ಟು ಮುರಿಯುವುದಿಲ್ಲ. ಇನ್ನೂ ಆರೇಳು ವರ್ಷಗಳಿಗೊಮ್ಮೆ ನಡೆಯುವ ಈ ಹಬ್ಬದ ಸಂದರ್ಭದಲ್ಲಿ ಹಸಿ ಕರಗ ತರುವ ಪದ್ಧತಿ ರೂಢಿಯಲ್ಲಿದೆ. ಇಲ್ಲಿನ ರಾಹುಗಲ್ಲಿಗೆ ಬಲಿ ಕೊಡುವ ಪದ್ಧತಿ ಇದ್ದು, ಬಲಿ ನೀಡಿದ ತರುವಾಯ, ಆ ರಾಹುಗಲ್ಲನ್ನು ಕೆಳ ಮುಖ ಮಾಡಿ ಮಣ್ಣು ಮುಚ್ಚುತ್ತಾರೆ. ಬಹಳ ವರ್ಷಗಳ ಹಿಂದೆ ಈ ದೇವತೆಗಳಿಗೆ ನರಬಲಿ ಕೊಡುವ ಸಂಪ್ರದಾಯವೂ ಇತ್ತಂತೆ. ಇದರ ಹಿಂದೆ ಭಯಾನಕ ಇತಿಹಾಸವಿದೆ. ಅದನ್ನು ಹೇಳಲು ಸಹ ಭಯವಾಗುತ್ತದೆ ಎನ್ನುತ್ತಾರೆ ಗ್ರಾಮದ ಹಿರಿಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net