ಪರರ ಹಸಿವನ್ನು ನೀಗಿಸುವುದರಲ್ಲಿದೆ ಸಂತಸ : ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ

New Project (1)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಆಹಾರವನ್ನು ಮೊದಲು ದೇವರಿಗೆ ಅರ್ಪಿಸಿದ ನಂತರ ನಾವು ಸೇವಿಸುವ ಪದ್ಧತಿ ಸನಾತನ ಸಂಸ್ಕೃತಿಯದ್ದು. ಇಂತಹ ಶ್ರೇಷ್ಠ ಕ್ರಮವನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ನಮ್ಮೆಲ್ಲರ ಶ್ರೇಯಸ್ಸು ಅಡಗಿದೆ. ಬ್ರಹ್ಮಕಲಶೋತ್ಸವಕ್ಕೆ ಸುತ್ತಲಿನ ಗ್ರಾಮಸ್ಥರು ತಾವು ಬೆಳೆದ ಸುವಸ್ತುಗಳನ್ನು ತಂದು ದೇವರಿಗರ್ಪಣೆ ಮಾಡಿದ್ದಾರೆ. ಇನ್ನೊಬ್ಬರ ಹಸಿವನ್ನು ನೀಗಿಸುವ ಸಂತಸ ಬೇರೆ ಯಾವುದರಲ್ಲೂ ಕಾಣಸಿಗದು ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಿಗೆ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾರಂಭದ ಮೊದಲ ದಿನ ಉಗ್ರಾಣ ಪೂಜೆ ನೆರವೇರಿಸಿ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಹರ್ಷೇಂದ್ರ ಕುಮಾರ್ ಉಗ್ರಾಣದ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆನುವಂಶಿಕ ಆಡಳಿತ ಮೊಕ್ತೇಸರ ಮತ್ತು ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಿದರು.

ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಮಲ್ಲಿಕಾ ಪಕಳ, ಯೋಗೀಶ್ ಕುಮಾರ್ ನಡಕರ, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಅಳದಂಗಡಿ ಗ್ರಾ.ಪಂ.ಅಧ್ಯಕ್ಷೆ ಸರಸ್ವತಿ, ಬ್ರಹ್ಮಕಲಶೋತ್ಸವದ ಪ್ರಧಾನ ಸಂಚಾಲಕ ಶಿವಪ್ರಸಾದ ಅಜಿಲ ಉಪಸ್ಥಿತರಿದ್ದರು.

ಧರ್ಮಸ್ಥಳದ ಹರ್ಷೇಂದ್ರ ಕುಮಾರ್, ಅಳದಂಗಡಿಯ ವೈದ್ಯ ಡಾ.ಎನ್.ಎಂ.ತುಳಪುಳೆ, ಕೋಡಂಗೆ ಸಂಜೀವ ಪೂಜಾರಿ, ಮಲ್ಲಿಕಾ ಪಕಳ, ಯೋಗೀಶ್ ಕುಮಾರ್ ನಡಕರ, ಅರ್ಚಕ ಪ್ರಕಾಶ್ ಹೊಳ್ಳ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಕಾರ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ವಂದಿಸಿದರು. ಸ್ವಾಗತ ಸಮಿತಿ ಸದಸ್ಯ ಪ್ರಕಾಶ್ ಶೆಟ್ಟಿ ನಿರೂಪಿಸಿದರು.

ತಂತ್ರಿವರ್ಯ ಶ್ರೀಪಾದ ಪಾಂಗಣ್ಣಾಯ ಹಾಗೂ ಪುರೋಹಿತರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಡಾ.ಪದ್ಮಪ್ರಸಾದ ಅಜಿಲರ ಉಪಸ್ಥಿತಿಯಲ್ಲಿ ಆಚಾರ್ಯಾದಿ ಋತ್ವಿಗ್ವರಣ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ನೆರವೇರಿತು. ದೇವಳದೊಳಗೆ ಕಂಕಣ ಬಂಧ, ಸಪ್ತಶುದ್ಧಿ, ಪ್ರಾಸಾದ ಶುದ್ಧ, ಅಂಕುರಾರೋಪಣ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ಪ್ರಾಕಾರ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು.

ಮೆರವಣಿಗೆ: ಆನೆಮಹಲಿನಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ನೂರಾರು ವಾಹನಗಳಲ್ಲಿ ಹಸಿರುವಾಣಿಯನ್ನು ತರಲಾಯಿತು. ಚೆಂಡೆವಾದನ, ಕೊಂಬು, ಕೀಲು ಕುದುರೆ ಕುಣಿತ, ಕುಣಿತ ಭಜನೆ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದ್ದವು.

ಕುಣಿತ ಭಜನೆ: ದೇವಳದ ಎದುರು ಭಾಗದ ಕ್ರೀಡಾಂಗಣದಲ್ಲಿ ತಾಲೂಕಿನ 35 ಕುಣಿತ ಭಜನಾ ತಂಡಗಳ ಆಕಷರ್ಕ ಸಮವಸ್ತ್ರಧಾರಿ ಭಜಕರಿಂದ ಕುಣಿತ ಭಜನೆ ಮುದಗೊಳಿಸಿತು. ಗುರುವಾರ ಪ್ರಾತಃಕಾಲದಿಂದ ಮಧ್ಯಾಹ್ನದವರೆಗೆ ಗಣಪತಿ ಹೋಮ, ಕ್ಷಾಲನಾದಿ ಬಿಂಬ ಶುದ್ಧಿ, ಪ್ರಾಯಶ್ಚಿತ್ತ ಹೋಮಗಳು, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಗಣಪತಿ ಪ್ರಾಯಶ್ಚಿತ್ತ ಹೋಮ ದುರ್ಗಾ ಪೂಜೆ, ಅಂಕುರ ಪೂಜೆ ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು. ರಾತ್ರಿ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ನಡೆದ ಗೀತ ಸಾಹಿತ್ಯ ಸಂಭ್ರಮ ನಡೆಯಿತು.

ಇಂದಿನ ಜನಾಂಗದವರು ವಿದ್ಯಾವಂತರಾಗಿ ವಿಚಾರವಂತರಾಗಿದ್ದಾರೆಯೇ ಹೊರತು ಆಚಾರವಂತರಾಗದಿರುವುದು ಬೇಸರದ ಸಂಗತಿ. ಎಲ್ಲರೂ ಆಚಾರವಂತರಾದರೆ ಹಿಂದು ಧರ್ಮಕ್ಕೆ ಅಪೂರ್ವ ಶಕ್ತಿ ಬಂದಂತೆ. ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತರ ಒತ್ತಡ ನಿರ್ವಹಣೆಗಾಗಿ ನೂತನ ಕ್ಯೂ ಕಾಂಪ್ಲೆಕ್ಸ್ ನಿರ್ಮಿಸಿದೆ. ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಡಯಾಲಿಸಿಸ್‌ನ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಜನರ ಹಿತಕ್ಕಾಗಿ ಕ್ಷೇತ್ರ ಹಲವಾರು ಯೋಜನೆ, ಬದಲಾವಣೆಗಳನ್ನು ಮಾಡಿಕೊಂಡು ಬರುತ್ತಿದೆ. ಹರ್ಷೇಂದ್ರ ಕುಮಾರ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ

ಇಂದಿನ ಕಾರ್ಯಕ್ರಮ

ಪ್ರಾತಃಕಾಲದಿಂದ ಮಧ್ಯಾಹ್ನದವರೆಗೆ ಶಾಂತಿಹೋಮಗಳು, ಕಲಶಾಭಿಷೇಕ, ಅಷ್ಟಬಂಧ ಪ್ರಕ್ರಿಯೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಮಂಟಪ ಸಂಸ್ಕಾರ, ಮಂಡಲ ರಚನೆ, ಬಲಿ ಬಿಂಬಾಧಿವಾಸ, ಅಧಿವಾಸ ಹೋಮ, ಮಹಾಪೂಜೆ, ಪ್ರಸಾದ ವಿತರಣೆ ನೆರವೇರಲಿದೆ. ಸಂಜೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ದೇವಳಕ್ಕೆ ಭೇಟಿ ನೀಡಿ ಆಶೀರ್ವದಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net