ಸಹಕಾರದಿಂದ ಬ್ರಹ್ಮಕಲಶೋತ್ಸವ ಯಶಸ್ವಿ : ಅಭಿನಂದನಾ ಸಭೆಯಲ್ಲಿ ಡಾ.ಪದ್ಮಪ್ರಸಾದ ಅಜಿಲ ಹೇಳಿಕೆ

New Project
Published on

ಬೆಳ್ತಂಗಡಿ : ದೇವಿಯ ಸಾನ್ನಿಧ್ಯ ವೃದ್ಧಿಗೆ ಮಾಡಿರುವ ಬ್ರಹ್ಮಕಲಶೋತ್ಸವ ಊರ-ಪರವೂರ ಬಂಧುಗಳ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆಯಲ್ಲದೆ ಅಜಿಲ ಸೀಮೆಗೆ ಹೆಮ್ಮೆ ತಂದಿದೆ ಎಂದು ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲ ಹೇಳಿದರು.

ಶ್ರೀ ಸೋಮನಾಥೇಶ್ವರೀ ದೇವಿಗೆ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಹಕರಿಸಿದವರಿಗೆ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು. ಉತ್ಸವದ ಯಶಸ್ಸಿಗಾಗಿ ಹದಿನಾರಕ್ಕೂ ಮಿಕ್ಕಿ ಸಮಿತಿಯನ್ನು ಮಾಡಲಾಗಿದ್ದು ಸಮಿತಿಗಳ ಎಲ್ಲ ಸಂಚಾಲಕರು, ಸದಸ್ಯರು ಅಹರ್ನಿಶಿ ದುಡಿದಿದ್ದಾರೆ. ಅಲ್ಪ ಅವಧಿಯ ಸಿದ್ಧತೆಯೊಂದಿಗೆ ಅಭೂತಪೂರ್ವ ಸಮಾರಂಭ ನಡೆದಿರುವುದು ಸಂತಸ ತಂದಿದೆ. ಸುತ್ತಲಿನ ಅನೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರೂ ಕೈ ಜೋಡಿಸಿರುವುದು ಶ್ಲಾಘನೀಯ ಎಂದರು.

ಪ್ರಮುಖ ಸ್ವಯಂಸೇವಕರಿಗೆ ಸ್ಮರಣಿಕೆ ನೀಡಿ ಅಭಿನಂದಿಸಿದರು. ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ಪ್ರಸನ್ನ ಹೆಗ್ಡೆ ಕರಂಬಾರು ಗುತ್ತು, ಗಂಗಾಧರ ಮಿತ್ತಮಾರು, ಸಮಿತಿ ಕಾರ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಪ್ರಧಾನ ಸಂಚಾಲಕ ಶಿವಪ್ರಸಾದ ಅಜಿಲ, ಸಮಿತಿ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯಕುಮಾರ್ ನಾವರ ಸ್ವಾಗತಿಸಿ, ವಂದಿಸಿದರು.ಮಕ್ಕಳಿಂದ ನೃತ್ಯ ಭಜನೆ, ಮಿಜಾರು ಉಮೇಶ್ ತಂಡದವರಿಂದ ತೆಲಿಕೆದ ಗೊಂಚೆಲ್ ಕಾರ್ಯಕ್ರಮ ನಡೆಯಿತು.

ಪುಷ್ಯ ಶುಕ್ಷ ತ್ರಯೋದಶಿಯಾದ ಭಾನುವಾರ ಸೀಮೆಯ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ದೇವಳದಲ್ಲಿ ಬೆಳಗ್ಗೆ ಪುಣ್ಯಾಹ, ಗಣಪತಿ ಹೋಮ, ದುರ್ಗಾ ಹೋಮ ನಡೆದು 508 ಕಲಶಗಳ ಅಭಿಷೇಕ ಪೂರ್ಣಗೊಂಡು ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಸೋಮನಾಥೇಶ್ವರೀ ದೇವಿಗೆ ದ್ರವ್ಯಮಿಳಿತ ಬ್ರಹ್ಮಕುಂಭಾಭಿಷೇಕ ನೆರವೇರಿತು. ಸಂಜೆ ಶ್ರೀ ದೇವರ ಉತ್ಸವ ನೆರವೇರಿತು. ರಾತ್ರಿ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net