ಭಕ್ತರು ಒಂದಾಗಿರಲು ಬೇಕು ದೇವತಾ ಮಂದಿರ : ಅದಮಾರು ಶ್ರೀ ಆಶೀರ್ವಚನ

New Project (2)
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಮನ ಚೆನ್ನಾಗಿರಬೇಕಾದರೆ ಊರ ಮಂದಿರ ಸುಂದರವಾಗಿರಬೇಕು. ದೇವರಿಗೆ ಮಂದಿರ ಬೇಕಿಲ್ಲ, ಭಕ್ತರಾಗಿ ನಾವೆಲ್ಲ ಒಂದಾಗಿರಲು ದೇವತಾ ಮಂದಿರ ಬೇಕು. ದೇವಾಲಯ ಬಿಂಬ, ನಾವು ಪ್ರತಿಬಿಂಬ. ಬಿಂಬ ಪರಿಶುದ್ಧವಾಗಿದ್ದಾಗ ನಾವೂ ಸುಂದರವಾಗಿ ಕಾಣಲು ಸಾಧ್ಯ. ಅದಕ್ಕಾಗಿ ನಮ್ಮ ದೇಗುಲಗಳನ್ನು ಭೌತಿಕವಾಗಿ, ದೈವಿಕವಾಗಿ ಸುಂದರವಾಗಿರಿಸಲು ಶ್ರದ್ಧಾಪೂರ್ವಕ ತೊಡಗಿಸಿಕೊಳ್ಳಬೇಕಾಗಿದೆ ಎಂದು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

‘ಪುತ್ತೆ’ ಎಂಬ ಪುರಾತನ ಹೆಸರಿನಿಂದ ಪರಿಚಿತವಾಗಿರುವ, ಶಿಲಾಮಯವಾಗಿ ಪುನಃ ನಿರ್ಮಾಣಗೊಂಡಿರುವ ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಬಿಡುಗಡೆಗೊಳಿಸಿ, ಅನ್ನದಾನ ನಿಧಿ ಸಮರ್ಪಣೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿದರು. ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಚೌಟರ ಅರಮನೆ ಕುಲದೀಪ ಎಂ. ಅಧ್ಯಕ್ಷತೆ ವಹಿಸಿದ್ದರು.

ಸಮಿತಿ ಗೌರವಾಧ್ಯಕ್ಷ ಕೆ.ಅಭಯಚಂದ್ರ ಜೈನ್, ಕೋಶಾಧಿಕಾರಿ ಕೆ.ಶ್ರೀಪತಿ ಭಟ್, ಪ್ರಧಾನ ಅರ್ಚಕ ಅಡಿಗಳ್ ಪಿ.ಅನಂತ ಕೃಷ್ಣ ಭಟ್, ಜತೆ ಕಾರ್ಯದರ್ಶಿ ವಿದ್ಯಾ ರಮೇಶ ಭಟ್ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಪುತ್ತಿಗೆಗುತ್ತು ನೀಲೇಶ್ ಶೆಟ್ಟಿ, ದ.ಕ. ಹಾಲು ಒಕ್ಕೂಟದ ಆಧ್ಯಕ್ಷ ಸುಚರಿತ ಶೆಟ್ಟಿ, ಅದಮಾರು ಸ್ವಾಮೀಜಿಯವರ ಪೂರ್ವಾಶ್ರಮದ ಸಹೋದರ ಇನ್ನ ಈಶ್ವರ ಮುಚ್ಚಿಂತಾಯ, ಹಿರಿಯರಾದ ಡಾ.ಪದ್ಮನಾಭ ಉಡುಪ, ಎಂಸಿಎಸ್ ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಎಚ್. ಧನಕೀರ್ತಿ ಬಲಿಪ, ಕೊಡಿಪಾಡಿ ಅಶೋಕ್ ಹೆಗ್ಡೆ, ಜಿ. ಉಮೇಶ್ ಪೈ ಮತ್ತಿತರರಿದ್ದರು. ಡಾ.ಧನಂಜಯ ಕುಂಬ್ಳೆ ನಿರೂಪಿಸಿದರು.

ಬ್ರಹ್ಮಕಲಶಕ್ಕೆ ಮುನ್ನ ದೇಗಲದ ಪಶ್ಚಿಮ ಭಾಗದಲ್ಲಿರುವ ಕಿರುಸೇತುವೆಯನ್ನು ನೇರವಾಗಿ ನಿರ್ಮಿಸುವ ಜತೆಗೆ ಇಲ್ಲಿನ ರಸ್ತೆಗಳನ್ನು ಅಗಲಗೊಳಿಸುವ ಕಾಮಗಾರಿಯನ್ನು ತುರ್ತಾಗಿ ನಡೆಸಲಾಗುವುದು. ಶಾಸಕ ಉಮಾನಾಥ ಕೋಟ್ಯಾನ್, ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ

ಕಾಣಿಕೆ 16ಲಕ್ಷಕ್ಕೇರಿಕೆ

ಶಂಕುಸ್ಥಾಪನೆಯ ಸಂದರ್ಭ 11,11,111 ರೂ. ಕಾಣಿಕೆ ಸಲ್ಲಿಸಿದ್ದ ಸ್ವಾಮೀಜಿಯಯವರು ಅದನ್ನು 16 ಲಕ್ಷ ರೂ.ಗೇರಿಸಿ ಸಮರ್ಪಿಸುವುದಾಗಿ ಪ್ರಕಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net