ಎಲ್ಲರ ಸೇವೆಯಿಂದ ಬ್ರಹ್ಮಕಲಶೋತ್ಸವ ಅಭೂತಪೂರ್ವ ಯಶಸ್ವಿ

pdb
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶೋತ್ಸವದ 12 ದಿನಗಳು ಬದುಕಿನ ಇತಿಹಾಸದಲ್ಲಿ ಮರೆಯಲಾಗದ ಕ್ಷಣಗಳಾಗಿವೆ. ಧಾರ್ಮಿಕ ವಿಧಿ, ಪೂಜೆಗಳು ಕಣ್ತುಂಬಿದ್ದು, ಎಲ್ಲರ ಸೇವೆಯಿಂದ ಅಭೂತಪೂರ್ವವಾಗಿ ನಡೆದು ಯಶಸ್ವಿಯಾಗಿದೆ ಎಂದು ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಹೇಳಿದರು.

ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನ, ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ಕಾಪುವಿನಲ್ಲಿ ಬುಧವಾರ ನಡೆದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದರು.

ಅಮ್ಮನ ಅನುಗ್ರಹ ಬ್ರಹ್ಮಕಲಶೋತ್ಸವ ಬಳಿಕ ರೋಮಾಂಚನದ ಅನುಭವ ತಂದಿದೆ. ದೇಶ ವಿದೇಶದಲ್ಲಿಯೂ ಕಾಪು ಮಾರಿಯಮ್ಮನ ಬಗ್ಗೆ ಮಾತಾಡುವಂತಾಗಿದೆ. ಕರಾವಳಿ ಭಾಗಕ್ಕೆ ಯಾರೇ ಬಂದರೂ ಅಮ್ಮನ ಸಾನ್ನಿಧ್ಯಕ್ಕೆ ಭೇಟಿ ನೀಡಿ ಪ್ರಾರ್ಥಿಸುತ್ತಾರೆ ಎಂದರು.

ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಮಾತನಾಡಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಹುಂಡಿ ಹಣದ ಬಗ್ಗೆ ತಪ್ಪು ಕಲ್ಪನೆ ಭಕ್ತರಲ್ಲಿದೆ. ಆದರೆ ಇಲ್ಲಿ ಹುಂಡಿಯಲ್ಲಿ ಸಂಗ್ರಹವಾಗುವ ಹಣವನ್ನು ವ್ಯವಸ್ಥಾಪನಾ ಸಮಿತಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಜವಾಬ್ದಾರಿಯಲ್ಲಿ ಬ್ಯಾಂಕ್‌ಗಳಲ್ಲಿ ಜಮೆ ಮಾಡಲಾಗುತ್ತಿದೆ. ಅದನ್ನು ಮುಂದೆ ದೇವಳ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತದೆ ಎಂದರು.

ಗೌರವಾಧ್ಯಕ್ಷ ಸುಧಾಕರ್ ಹೆಗ್ಡೆ ತುಂಗಾ, ಪ್ರಧಾನ ತಂತ್ರಿ ಕೊರಂಗ್ರಪಾಡಿ ಕುಮಾರಗುರು ತಂತ್ರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಪ್ರಮುಖರಾದ ಲಾಲಾಜಿ ಆರ್.ಮೆಂಡನ್, ಕೆ.ರಘುಪತಿ ಭಟ್, ಅನಿಲ್ ಬಲ್ಲಾಳ್, ಮನೋಹರ್ ಶೆಟ್ಟಿ, ಧರ್ಮಪಾಲ್ ದೇವಾಡಿಗ, ಕಿಶೋರ್ ಕುಮಾರ್ ಕುತ್ಯಾರ್, ಆರ್.ಜಿ.ಶೆಟ್ಟಿ, ಸುಧೀರ್ ಶೆಟ್ಟಿ ಸಾಗರ, ಭಗವಾನ್ ದಾಸ್ ಶೆಟ್ಟಿಗಾರ್, ಕೃಷ್ಣ ಪ್ರಸಾದ್ ಅಡ್ಯಂತಾಯ, ದಿವಾಕರ್ ಶೆಟ್ಟಿ ಕೊಡವೂರು, ಜಯಲಕ್ಷ್ಮೀ ಶೆಟ್ಟಿ, ಚರಿತ ದೇವಾಡಿಗ, ಕಾರ್ಯ ನಿರ್ವಹಣಾಧಿಕಾರಿ ರವಿಕಿರಣ್ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ ವರದಿ ವಾಚಿಸಿದರು. ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ ಶೆಟ್ಟಿ, ಸ್ವರ್ಣಗದ್ದುಗೆ ಸಮಿತಿಯ ದಿವಾಕರ್ ಶೆಟ್ಟಿ ಕಾಪು, ಹೊರೆಕಾಣಿಕೆ ಸಮಿತಿಯ ದೇವಿಪ್ರಸಾದ್ ಶೆಟ್ಟಿ, ನವದುರ್ಗ ಲೇಖನ ಯಜ್ಞ ಸಮಿತಿಯ ಸಾವಿತ್ರಿ ಗಣೇಶ್, ಘಂಟನಾದ ಸಮಿತಿಯ ಯೋಗೀಶ್ ಶೆಟ್ಟಿ ಬಾಲಾಜಿ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ ವರದಿ ವಾಚಿಸಿದರು. ದಾಮೋದರ ಶರ್ಮ ನಿರೂಪಿಸಿದರು.

10

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net