

ವಿಜಯವಾಣಿ ಸುದ್ದಿಜಾಲ ಉಡುಪಿ
ಎನ್ಎಸ್ಎಸ್ನಲ್ಲಿ ತೊಡಗಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಜ್ಞಾನ ಹಾಗೂ ಮೌಲ್ಯದ ಅರಿವು ಉಂಟಾಗುತ್ತದೆ. ಸಮಾಜ ಸೇವೆಯತ್ತ ಯುವತಿಯರೂ ಭಾಗಿಯಾಗುತ್ತಿದ್ದು, ಶ್ರಮ ಮತ್ತು ಶ್ರದ್ಧೆಯಿಂದ ತೊಡಗಿಕೊಳ್ಳಬೇಕು. ನಾಟ್ ಮೀ, ಬಟ್ ಯು ಎಂಬ ಎನ್ಎಸ್ಎಸ್ನ ಆಧ್ಯಾತ್ಮಿಕ ನುಡಿ ಪಾಲಿಸಬೇಕು ಎಂದು ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ. ರಘು ನಾಯ್ಕ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಅಜ್ಜರಕಾಡುನಲ್ಲಿರುವ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೊತ್ತರ ಅಧ್ಯಯನ ಕೇಂದ್ರದಲ್ಲಿ ಸೆಪ್ಟೆಂಬರ್ 24ರಂದು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಕಾರ್ಯಕ್ರಮ ಹಾಗೂ ಎನ್ಎಸ್ಎಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಎನ್ಎಸ್ಎಸ್ ಘಟಕ-1ರ ಸಂಯೋಜನಾಧಿಕಾರಿ ಡಾ. ಜಯಮಂಗಲಾ ಸ್ವಾಗತಿಸಿ, ವಿದ್ಯಾರ್ಥಿನಿಯರೂ ಸಹ ಸಮಾಜಸೇವೆ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳುವ ಅಗತ್ಯತೆ ಇದೆ ಎಂದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಪ್ರೊ. ನಿಕೇತನಾ ಮಾತನಾಡಿ, ಎನ್ಎಸ್ಎಸ್ನಿಂದ ಸಮಾಜದೊಂದಿಗೆ ಹೊಂದಿಕೊಳ್ಳುವ ಮನೋಭಾವ ಬೆಳೆಯುತ್ತದೆ, ಅಲ್ಲದೆ, ಜವಾಬ್ದಾರಿತನ ಮತ್ತು ಶಿಸ್ತಿನ ಮಹತ್ವವೂ ತಿಳಿಯುತ್ತದೆ ಎಂದರು.
ಐಕ್ಯುಎಸಿ ಸಂಯೋಜಕಿ ಪ್ರೊ. ಶ್ರೀಮತಿ ಅಡಿಗ ಮಾತನಾಡಿದರು. ಪ್ರಭಾರ ಪ್ರಾಂಶುಪಾಲ ಪ್ರೊ. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ಎನ್ಎಸ್ಎಸ್ ಘಟಕ-2ರ ಸಂಯೋಜನಾಧಿಕಾರಿ ಡಾ. ರವೀಶ ಬಿ. ವಂದಿಸಿದರು. ಸೃಷ್ಟಿ ಕಾರ್ಯಕ್ರಮ ನಿರೂಪಿಸಿದರು.