ಅಯ್ಯೋ ಅಮ್ಮ... ಎನ್ನುತ್ತ ಬಂದ ಪುಟ್ಟಕಂದನನ್ನೂ ಕೊಂದೇ ಬಿಟ್ಟ! ತಾಯಿಯದ್ದು ಅರ್ಧಜೀವ...

murder 1
Published on

ಬೆಂಗಳೂರು: ಇದು ನರಹಂತಕನ ಕ್ರೂರತೆಗೆ ನಲುಗಿದ ತಾಯಿ-ಮಗುವಿವನ ಕರುಣಾಜನಕ ಕಥೆ. ಸಾವು ಬದುಕಿನ ನಡುವೆ ಹೋರಾಡುತ್ತ ಅರೆಜೀವದಲ್ಲಿ ತಾಯಿ ಬಿದ್ದಿದ್ದಾಳೆ, ಅಯ್ಯೋ ಅಮ್ಮ... ಎನ್ನುತ್ತಾ ಓಡಿಬಂದ ಮಗುವನ್ನೂ ಕೊಂದು ಶವ ಬಿಟ್ಟು ಅಲ್ಲಿಂದ ದುಷ್ಕರ್ಮಿ ಎಸ್ಕೇಪ್​ ಆದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇಂತಹ ಮನಕಲಕುವ ಘಟನೆ ಜ್ಞಾನಭಾರತಿ ಪೊಲೀಸ್​ ಠಾಣಾ ವ್ಯಾಪ್ತಿಯ ಜ್ಞಾನಗಂಗಾನಗರದಲ್ಲಿ ನಡೆದಿದೆ. ಆರೋಪಿ ಗಾದಿಲಿಂಗಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಗಂಡ ಊರಿಗೆ ಹೋಗಿದ್ದರಿಂದ ಮನೆಯಲ್ಲಿ ಪತ್ನಿ ಮತ್ತು ಪುಟ್ಟ ಮಗು ಇಬ್ಬರೇ ಇದ್ದರು. ಆ ಮನೆಗೆ ಎಂಟ್ರಿ ಕೊಟ್ಟ ಗಾದಿಲಿಂಗಪ್ಪಗೆ ಮಹಿಳೆ ಮೈಮೇಲಿನ ಚಿನ್ನದ ಮೇಲೆ ಕಣ್ಣುಬಿದ್ದಿದೆ. ಚಿನ್ನ ನೋಡಿ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲ್ಲಲು ಯತ್ನಿಸುವಾಗ 'ಅಮ್ಮ... ಎಂದು ಅಳುತ್ತಾ ಓಡಿಬಂದ ಪುಟ್ಟ ಕಂದನನ್ನೂ ಕೊಂದು ಹಾಕಿದ್ದಾನೆ.

ತಾಯಿ ಅರೆಜೀವವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಮಗು ಆಕೆಯ ಪಕ್ಕದಲ್ಲೇ ಶವವಾಗಿ ಬಿದ್ದಿತ್ತು. ಈ ದೃಶ್ಯಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದರು. ಸ್ಥಳಕ್ಕೆ ಬಂದ ಜ್ಞಾನಭಾರತಿ ಠಾಣೆ ಪೊಲೀಸರು ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಮಗು ಕೊಂದು-ತಾಯಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಆರೋಪಿ ಎಸ್ಕೇಪ್​ ಆಗುತ್ತಿರುವ ದೃಶ್ಯ ಮನೆ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಇನ್ನು ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಮಹಿಳೆಯ ಚಿಕಿತ್ಸೆಗೆ ಇನ್​ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ಹಾಗೂ ತಂಡ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮರೆದಿದೆ. ಚಿಕಿತ್ಸೆಗಾಗಿ ಈ ತಂಡ ಒಂದು ಲಕ್ಷ ರೂ. ಖರ್ಚು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net