ಮಹಿಳಾ ದಿನಾಚರಣೆಗೆ ಬಿಎಂಟಿಸಿ ಗಿಫ್ಟ್​! ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಬಾಕ್ಸ್-ಇಟ್

BMTC
Published on

ಬೆಂಗಳೂರು: ಬಿಎಂಟಿಸಿ ಬಸ್ ಹಾಗೂ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರ ಮೇಲಾಗುವ ದೌರ್ಜನ್ಯಗಳ ವಿರುದ್ಧ ದೂರು ನೀಡಲು ಬಾಕ್ಸ್-ಇಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ.


ನಿರ್ಭಯ ಅನುದಾನದ ಅಡಿಯಲ್ಲಿ ಮಹಿಳಾ ಸುರಕ್ಷತೆಗಾಗಿ ಬಿಎಂಟಿಸಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳಾ ವಿಶ್ರಾಂತಿ ಗೃಹ, ಸಾರಥಿ ವಾಹನಗಳ ಮೂಲಕ ಸೇವೆ ನೀಡಲಾಗುತ್ತಿದೆ. ಅದರ ಜತೆಗೆ ಪೊಲೀಸ್ ಇಲಾಖೆ ಸಹಯೋಗದಲ್ಲಿ ಪ್ರತ್ಯೇಕ ಸಹಾಯವಾಣಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಹಾಗೆಯೇ, ಬಿಎಂಟಿಸಿ ಬಸ್‌ಗಳಲ್ಲಿ ಸಿಸಿ ಕ್ಯಾಮರಾ, ತುರ್ತು ಪರಿಸ್ಥಿತಿಯಲ್ಲಿ ಬಳಸು ಅಲಾರಂ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ. ಅವುಗಳ ಜತೆಗೆ ಇದೀಗ ಬಸ್ ನಿಲ್ದಾಣ ಮತ್ತು ನಿಲುಗಡೆಗಳಲ್ಲಿ ಬಾಕ್ಸ್-ಇಟ್ ಹೆಸರಿನ ಡ್ರಾಪ್ ಬಾಕ್ಸ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

ಮಹಿಳಾ ದಿನಾಚರಣೆ ಕೊಡುಗೆ:
ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಬಿಎಂಟಿಸಿ ಮಹಿಳಾ ದಿನಾಚರಣೆಗೆ ಬಾಕ್ಸ್-ಇಟ್ ವ್ಯವಸ್ಥೆ ಜಾರಿಗೊಳ್ಳಲಿದೆ. ಅದರ ಮೂಲಕ ಮಹಿಳಾ ಪ್ರಯಾಣಿಕರು ತಮ್ಮ ಮೇಲಾಗುವ ದೌರ್ಜನ್ಯದ ಬಗ್ಗೆ ದೂರನ್ನು ಬರೆದು ಡ್ರಾಪ್ ಬಾಕ್ಸ್‌ನಲ್ಲಿ ಹಾಕಬೇಕಿದೆ. ಅದನ್ನಾಧರಿಸಿ ಬಿಎಂಟಿಸಿ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ದೌರ್ಜನ್ಯವಷ್ಟೇ ಅಲ್ಲದೆ, ಬಸ್ ಸೇವೆ, ಬಿಎಂಟಿಸಿ ಸಿಬ್ಬಂದಿ ವರ್ತನೆ ಸೇರಿ ಇನ್ನಿತರ ವಿಷಯಗಳ ಬಗ್ಗೆಯೂ ಬಾಕ್ಸ್-ಇಟ್‌ನಲ್ಲಿ ದೂರು ನೀಡಬಹುದಾಗಿದೆ.


ಪೊಲೀಸರೊಂದಿಗೆ ಸಂಪರ್ಕ:
ಬಿಎಂಟಿಸಿ ಪ್ರಯಾಣಿಕರಷ್ಟೇ ಅಲ್ಲದೆ, ಬಸ್ ನಿಲ್ದಾಣ ಮತ್ತು ನಿಲುಗಡೆ ಸುತ್ತಮುತ್ತಲಿನ ನಿವಾಸಿಗಳು ತಮಗಿರುವ ಸಮಸ್ಯೆಗಳ ಕುರಿತು ಬಾಕ್ಸ್-ಇಟ್ ಮೂಲಕ ದೂರು ನೀಡಬಹುದು. ಬಸ್ ಸೇವೆ ಹಾಗೂ ದೌರ್ಜನ್ಯವನ್ನು ಹೊರತುಪಡಿಸಿ ಉಳಿದ ದೂರುಗಳನ್ನು ಬಿಎಂಟಿಸಿಯಿಂದ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸಲ್ಲಿಸಲಾಗುವುದು. ಆಮೂಲಕ ಮಹಿಳಾ ಸುರಕ್ಷತೆಗೆ ಹೊಸದೊಂದು ಪ್ರಯೋಗ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net