ಹರಮಘಟ್ಟ ಅರಣ್ಯದಲ್ಲಿ 32 ನಾಡಬಾಂಬ್ ಪತ್ತೆ

NMT CREIME
Published on

ನ್ಯಾಮತಿ: ತಾಲೂಕಿನ ಫಲವನಹಳ್ಳಿ ಗ್ರಾಪಂ ವ್ಯಾಪ್ತಿಯ ಸರ್ವೆ ನಂಬರ್ 61ರ ಹರಮಘಟ್ಟ ರಾಜ್ಯ ಮೀಸಲು ಅರಣ್ಯ ಪ್ರದೇಶದಲ್ಲಿ ನಾಲ್ವರು ದುಷ್ಕರ್ವಿುಗಳು, ಕಾಡು ಪ್ರಾಣಿಗಳ ಬೇಟೆಗೆಂದು ತಂದಿದ್ದ 32 ನಾಡಬಾಂಬ್ (ಮದ್ದು) ಮಂಗಳವಾರ ಪತ್ತೆಯಾಗಿವೆ.

ಇದರ ಜತೆಗೆ ಕೃತ್ಯಕ್ಕೆ ಬಳಸಿದ್ದ 2 ಬೈಕ್​ಗಳನ್ನು ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ನ್ಯಾಮತಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳ ವಿರುದ್ಧ ಮೀಸಲು ಅರಣ್ಯ ಪ್ರದೇಶ ಅಕ್ರಮ ಪ್ರವೇಶ, ಕಾಡು ಪ್ರಾಣಿ ಬೇಟೆ ಅಡಿಯಲ್ಲಿ ಇಲಾಖೆ ಅಧಿಕಾರಿಗಳು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಕ್ರಮ ಪ್ರವೇಶ: ದುಷ್ಕರ್ವಿುಗಳು ಅಕ್ರಮ ಪ್ರವೇಶದ ವೇಳೆ ಅರಣ್ಯಾಧಿಕಾರಿಗಳನ್ನು ಕಂಡು ಕಾಲ್ಕಿತ್ತಿದ್ದಾರೆ. ಈ ವೇಳೆ ಆರೋಪಿಗಳಾದ ಮಾದಾಪುರ ಗ್ರಾಮದ ತಿಮ್ಮಪ್ಪ, ಗುಡ್ಡಪ್ಪ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರಿಗೆ ಶೋಧ ಕಾರ್ಯ ಮುಂದುವರಿದಿದೆ. ಈ ಹಿಂದೆಯೂ ಇದೇ ಸರ್ವೆ ನಂಬರ್​ನಲ್ಲಿ ನಾಡಬಾಂಬ್ ಇಡಲಾಗಿತ್ತು ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಬರ್ಕತ್​ಅಲಿ, ಗಸ್ತು ಅರಣ್ಯ ಪಾಲಕ ಎಚ್.ಬಿ.ಅಂಜಲಿ, ಕ್ಷೇಮಾಭಿವೃದ್ಧಿ ಅರಣ್ಯ ವೀಕ್ಷಕ ಎಂ.ಪಿ.ಬಸವರಾಜಪ್ಪ, ನೆಡುತೋಪು ಕಾವಲುಗಾರ ಸುನೀಲ, ಪ್ರವೀಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net