ಗೌಡಸಂದ್ರದಲ್ಲಿ ಕೊಳವೆಬಾವಿಗಳ ಕೇಬಲ್​ ಕಳವು

Published on

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ತಾಲೂಕಿನ ಗೌಡಸಂದ್ರದಲ್ಲಿ ಬುಧವಾರ ರಾತ್ರಿ ಹತ್ತಕ್ಕೂ ಹೆಚ್ಚು ರೈತರ ಕೊಳವೆ ಬಾವಿಗಳ ಕೇಬಲ್​ ಕಳವಾಗಿವೆ.

ಕೊಳವೆ ಬಾವಿಗಳ ಪಂಪ್​ ಮೋಟಾರ್​ ಕೇಬಲ್​ನಲ್ಲಿ ತಾಮ್ರದ ತಂತಿಯಿರುವುದರಿಂದ ಪದೇಪದೆ ಈ ರೀತಿಯ ಕೃತ್ಯಗಳು ನಡೆಯುತ್ತಿವೆ. 1 ಮೀಟರ್​ ಕೇಬಲ್​ ಬೆಲೆ 230 ರೂಪಾಯಿಗೂ ಅಧಿಕವಿದ್ದು, ಕಳ್ಳರು ಕೇಬಲ್​ ಕದ್ದು ಅರ್ಧ ಬೆಲೆಗೆ ಮಾರಾಟ ಮಾಡುವ ಮೂಲಕ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಗೌಡಸಂದ್ರ ಗ್ರಾಮದಲ್ಲಿ ಕೊಳವೆ ಬಾವಿಗಳ ಜತೆಗೆ ಸರ್ಕಾರದ ಕುಡಿಯುವ ನೀರು ಸರಬರಾಜಿನ ಕೇಬಲ್​ ಹಾಗೂ ಒಂದು ಬಾವಿಗೆ ಅಳವಡಿಸಿದ್ದ ಕೇಬಲ್​ ಸಹ ಕಳವು ಮಾಡಲಾಗಿದೆ. ಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮದ ದೇವರಾಜು, ಗೋವಿಂದ್​ ರೆಡ್ಡಿ, ನಂಜುಂಡೇಗೌಡ, ಗಂಗಪ್ಪ, ನಂಜುಂಡ, ಸಿದ್ದಲಿಂಗಪ್ಪ, ಚಿಕ್ಕಗಂಗಪ್ಪ ಹಾಗೂ ಇತರರು ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net