

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ 22 ಗಣ್ಯರ ಲೇಖನಗಳನ್ನು ಒಳಗೊಂಡ ‘ಪುಟಕ್ಕಿಟ್ಟ ಚಿನ್ನ’ ಕೃತಿ ಬಿಡುಗಡೆ ಮಾಡಲಾಗುತ್ತಿದೆ.
‘ಒಂದು ವರ್ಷದ ಆಡಳಿತ ಬಿಎಸ್ವೈ ಸರ್ಕಾರದ ಸಾಧನೆಯ ಒರೆಗಲ್ಲು’ ಎಂಬ ಆಶಯವನ್ನಿಟ್ಟುಕೊಂಡು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್ ಪುಸ್ತಕ ಸಂಪಾದಿಸಿದ್ದಾರೆ. ಬಳ್ಳಾರಿ ಜಿಲ್ಲೆ ಸಿರಿಗೇರಿಯ ಅನ್ನಪೂರ್ಣ ಪ್ರಕಾಶ ಪುಸ್ತಕ ಪ್ರಕಟಿಸಿದೆ. ಜು.26ರಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಕೃತಿ ಬಿಡುಗಡೆಯಾಗಲಿದೆ.
ವಿವಿಧ ಕ್ಷೇತ್ರಗಳಲ್ಲಿ ಸರ್ಕಾರದ ಸಾಧನೆ, ಬಿಎಸ್ವೈ ಒಳನೋಟ ಹಾಗೂ ಕೊಡುಗೆಗಳ ಬಗ್ಗ್ಗೆ ಲೇಖಕರು ಬೆಳಕು ಚೆಲ್ಲಿದ್ದಾರೆ. ಶಿಕ್ಷಣ ಹಾಗೂ ಜ್ಞಾನದ ಬಗ್ಗೆ ಗುರುರಾಜ ಕರಜಗಿ, ಆರೋಗ್ಯ ಹಾಗೂ ಕರೊನಾ ನಿಯಂತ್ರಣದ ಬಗ್ಗೆ ಡಾ. ಸಿ.ಎನ್. ಮಂಜುನಾಥ್, ಶಿಕ್ಷಣದ ಬಗ್ಗೆ ಪ್ರೊ. ನಿರಂಜನಾರಾಧ್ಯ, ವಿಜ್ಞಾನ ಹಾಗೂ ತಂತ್ರಜ್ಞಾನದ ಬಗ್ಗೆ ಸುಧೀಂದ್ರ ಹಾಲ್ದೊಡ್ಡೇರಿ, ನಗರಾಭಿವೃದ್ಧಿಯ ಬಗ್ಗೆ ಐಸೆಕ್ನ ಡಾ. ಕಲಾ, ಸುಸ್ಥಿರ ಕೃಷಿಯ ಬಗ್ಗೆ ಐಸೆಕ್ನ ಡಾ. ಮಂಜುನಾಥ್, ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಬಗ್ಗೆ ಸತ್ಯಲಿಂಗರಾಜು, ಕೃಷಿಯ ಬಗ್ಗೆ ಡಾ. ಎ.ಬಿ. ಪಾಟೀಲ್, ನೀರಾವರಿಯ ಬಗ್ಗೆ ಪ್ರೊ. ಸಿ. ನರಸಿಂಹಪ್ಪ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಮಧ್ಯ ಕರ್ನಾಟಕ ಕುರಿತಂತೆ ಸಿರಿಗೆರೆಯ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕುರಿತಂತೆ ಬಾಲ್ಕಿಯ ಡಾ. ಶ್ರೀ ಬಸವಲಿಂಗ ಪಟ್ಟದದೇವರು, ಶಿವಮೊಗ್ಗ ಅಭಿವೃದ್ಧಿ ಬಗ್ಗೆ ಕಿಮ್ಮನೆ ಜಯರಾಮ್ ಆಡಳಿತ ಕುರಿತಂತೆ ನಿವೃತ್ತ ಐಎಎಸ್ ಅಧಿಕಾರಿಗಳಾದ ಕೆ. ಜಯರಾಜ್ ಹಾಗೂ ಕೋಟಿಲಿಂಗನಗೌಡ, ಪರಿಸರ ಕುರಿತು ಡಾ. ಯಲ್ಲಪ್ಪರೆಡ್ಡಿ ಸೇರಿ 22 ಲೇಖಕರ ಲೇಖನಗಳನ್ನು ಕೃತಿ ಒಳಗೊಂಡಿದೆ.
ಕಿರುಹೊತ್ತಗೆ: ಇದಲ್ಲದೇ ಒಂದು ವರ್ಷದಲ್ಲಿ ವಿವಿಧ ಇಲಾಖೆಗಳು ಸಾಧಿಸಿರುವ ಸಾಧನೆಗಳ ಬಗ್ಗೆ ಕಿರುಹೊತ್ತಗೆಯೊಂದನ್ನು ಹೊರತರಲಾಗುತ್ತಿದೆ.