ಸಮಾಜದ ಏಳಿಗೆಗೆ ಪುಸ್ತಕ ಹೊಸ ಕಣ್ಣು ಇದ್ದಂತೆ: ಕವಿ ಜಯಂತ ಕಾಯ್ಕಿಣಿ ಅಭಿಮತ

jayanth
Published on

ಬೆಂಗಳೂರು: ಪ್ರತಿ ಪುಸ್ತಕವೂ ಸಮಾಜದ ಏಳಿಗೆಗೆ,ಮನುಷ್ಯನ ಜೀವನದ ಸಹಬಾಳ್ವೆಗೆ ಹೊಸ ಕಣ್ಣು ಇದ್ದಂತೆ ಎಂದು ಕವಿ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.

ಅಂಕಿತ ಪುಸ್ತಕ ಪ್ರಕಾಶನ ವತಿಯಿಂದ ಭಾನುವಾರ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಲೇಖಕ ಎಚ್.ದುಂಡಿರಾಜ್ ಬರೆದಿರುವ ‘ಹನಿಟ್ರಾೃಪ್’ ಹನಿಗವನಗಳು, ಸಾಹಿತಿ ಅಮಿತಾ ಭಾಗವತ್ ಅವರ ‘ನೀಲಿ ನಕ್ಷೆ’, ನಾ.ಮೊಗಸಾಲೆ ರಚಿಸಿರುವ ‘ನೀರು’ ಕಾದಂಬರಿ ಹಾಗೂ ಎನ್.ಸಿ.ಮಹೇಶ್ ಅವರ ‘ಸಾಕುತಂದೆ ರೂಮಿ’ ನಾಟಕ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಸಾಹಿತ್ಯ ಎಂಬುದು ಬೇರೆ ಬೇರೆ ಕನ್ನಡಿಗಳಿಂದ ಬದುಕನ್ನು ಗ್ರಹಿಸುವ ಸಂಗತಿಯಾಗಿದೆ. ಸಾಹಿತ್ಯದ ಚಟುವಟಿಕೆಗಳು ಮನುಷ್ಯ ಲೋಕದ ಜತೆಗೆ ಋಣವನ್ನು ಮತ್ತೆ ಮತ್ತೆ ಆಚರಿಸುವ ಕೃತಿಗಳಾಗಿವೆ. ಹಲವಾರು ಜನರ ಋಣದಲ್ಲಿ ನಮ್ಮ ಬದುಕಿದೆ. ಮುಂದೆ ಏನಾಗುತ್ತದೆ ಎಂಬುದರ ಬಗ್ಗೆ ಗೊತ್ತಿಲ್ಲದೆ ನಾವು ಬದುಕುತ್ತಿದ್ದೇವೆ ಎಂದು ಹೇಳಿದ ಜಯಂತ ಕಾಯ್ಕಿಣಿ, ಕಾದಂಬರಿಯಲ್ಲಿ ಮುಖ್ಯವಾಗಿ ಬೇಕಾಗಿರುವುದು ‘ಬಿಡಿ-ಇಡಿ’ಗಳ ಸಹಯೋಗ. ಕಥೆಯಲ್ಲಿ ಈ ಅಂಶ ಬೇಗ ಮುಗಿದು ಹೋಗುತ್ತವೆ. ಪ್ರತಿ ಕಥೆಯ ಜೀವವೇ ಅದರ ಮಿತಿ ನಿರ್ಧರಿಸುತ್ತದೆ. ಕಾದಂಬರಿಕಾರ ಹಲವು ಪಾತ್ರಗಳ ಜತೆಗೆ ಒಬ್ಬನೇ ಒದ್ದಾಡಬೇಕಾಗುತ್ತದೆ. ಪ್ರತಿ ಕಾದಂಬರಿಗಳಲ್ಲಿ ಜೆಡೆ ಹೆಣೆದಂತೆ ಬಹಳಷ್ಟು ಎಳೆಗಳಿರುತ್ತವೆ. ಹೀಗಾಗಿ, ಕೆಲ ಸಂದರ್ಭದಲ್ಲಿ ಒಂದೇ ಎಳೆಯ ಜತೆಗೆ ಹೋಗಬೇಕಾಗುತ್ತದೆ ಎಂದು ವಿವರಿಸಿದರು.

ಹಿರಿಯ ಪತ್ರಕರ್ತ ಜೋಗಿ ಮಾತನಾಡಿ, ನಾಟಕದ ಜಗತ್ತಿನಲ್ಲಿ ಕಳೆದು ಹೋಗುವಷ್ಟು ಸುಲಭವಾಗಿ ಕಾದಂಬರಿ ಜಗತ್ತಿನಲ್ಲಿ ಕಳೆಯಲು ಆಗುವುದಿಲ್ಲ. ನಾಟಕಕ್ಕೂ ಕವಿತೆಗೂ ಸಾಮ್ಯವಿದೆ. ನಾಟಕ ಹಾಗೂ ಕವಿತೆಗಳನ್ನು ಕಥೆಯಾಗಿ ಓದುವ ಬದಲು ಅನುಭವವಾಗಿ ಓದಬೇಕು ಎಂದರು. ಕಥೆಗಾರ ಕೃಷ್ಣಮೂರ್ತಿ ಕರ್ಕಿ, ಕವಿ ಎಚ್.ದುಂಡಿರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net