ಜನರಲ್ಲಿ ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಯಲಿ

Raghu_05_Kuvempu_Vichara_Kranthi_Book_Releasde_@_NGO_Hall (2)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವಿಚಾರಗಳಲ್ಲಿ ಭದ್ರತೆ ಬಂದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಅದಕ್ಕೆ ಮುಖ್ಯವಾಗಿ ಅವರಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆಯಬೇಕು. ಮನುಷ್ಯನಾಗಿ ಬದುಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜನಪ್ರಕಾಶನದ ವತಿಯಿಂದ ಶನಿವಾರ ನಗರದ ಎನ್​ಜಿಒ ಸಭಾಂಗಣದಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಸಂಪಾದಕತ್ವದ "ಕುವೆಂಪು ವಿಚಾರ ಕ್ರಾಂತಿ' ಪುಸ್ತಕ ಜನಾರ್ಪಣೆಗೊಳಿಸಿ ಮಾತನಾಡಿದರು.

ದೇಶದಲ್ಲಿ ಅನೇಕ ದಾರ್ಶನಿಕರು ತಮ್ಮ ದೃಷ್ಟಿಕೋನದಿಂದ ಸಮಾಜದಲ್ಲಿನ ಅಂಕು&ಡೊಂಕುಗಳನ್ನು ತಿದ್ದಲು ಪ್ರಯತ್ನಪಟ್ಟಿರುತ್ತಾರೆ. ಆದರೆ ಇಲ್ಲಿ ಬಸವಣ್ಣನ ತತ್ವಗಳನ್ನು ಹೇಳಿಯೇ ಜಾತಿ ಮಾಡುತ್ತಾರೆ. ನಮ್ಮ ಜಾತಿ ವ್ಯವಸ್ಥೆಯಲ್ಲಿ ಜಡತ್ವವಿದೆ. ಚಲನಶೀಲತೆ ಇಲ್ಲ. ಆದ್ದರಿಂದಲೇ ಜಾತಿ, ಧರ್ಮ ಇತ್ಯಾದಿಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಮೌಢ್ಯ, ಕರ್ಮ ಸಿದ್ಧಾಂತಗಳನ್ನು ಬಹಳಷ್ಟು ವಿದ್ಯಾವಂತರೇ ಅನುಸರಿಸುತ್ತಿರುವುದು ಕಾಣುತ್ತೇವೆ. ಜಾತಿ ಧರ್ಮ ಇರುವಲ್ಲಿಯ ವರೆಗೆ ಕುವೆಂಪು ಅವರ ಸಾಹಿತ್ಯ, ವಿಚಾರಧಾರೆಗಳು ಪ್ರಸ್ತುತ ಎಂದು ತಿಳಿಸಿದರು.

ಕೃತಿಯ ಲೇಖಕ, ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಕುವೆಂಪು ಅವರು ನಂಬಿದ ಧರ್ಮ ಸಾಂಸ್ಥಿಕ ಧರ್ಮ ಅಲ್ಲ, ಆಧ್ಯಾತ್ಮಿಕವಾಗಿದೆ. ಜಾತಿ ವಿಷಯಕ್ಕೆ ಬಂದಾಗ ಕುವೆಂಪು ಅವರನ್ನು ಬ್ರಾಹ್ಮಣ ವಿರೋಧಿ ಎನ್ನುವ ಸಂಪ್ರದಾಯದವರಿದ್ದಾರೆ. ಆದರೆ, ಅವರು ಪುರೋಹಿತ ಶಾಹಿ ಎಲ್ಲ ಧರ್ಮಗಳಿಗೂ ಅನ್ವಯಿಸುತ್ತದೆ ಎಂದಿದ್ದರು. ತಾನು ಯಾವುದೇ ಜಾತಿಯ ವಿರುದ್ಧವಾಗಿ ಮಾತನಾಡುವುದಿಲ್ಲ ಎಂದು ಹೇಳಿದ್ದರು. ಪ್ರಸ್ತುತ ಸಮಸ್ಯೆಗಳಿಗೆ ಕುವೆಂಪು ಸಾಹಿತ್ಯದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯ. ಆದ್ದರಿಂದ ಈ ಕೃತಿಗೆ ಜಾನಾರ್ಪಣೆ ಎಂದು ನಾನೇ ಇಟ್ಟಿರುತ್ತೇನೆ, ಅದೇ ಮುಖ್ಯವಾಗಿದೆ. ಇದು ಒಂದು ಉದ್ದೇಶ ಬದ್ಧವಾದ ಕೃತಿಯಾಗಿದ್ದು, ಕುವೆಂಪು ಅವರ ವಿಚಾರಧಾರೆ ಎಲ್ಲರಿಗೂ ತಲುಪಬೇಕು ಎಂದು ತಿಳಿಸಿದರು. ನ್ಯಾಯಮೂರ್ತಿ ಎಚ್​.ಎನ್​.ನಾಗಮೋಹನ್​ದಾಸ್​, ಹಿರಿಯ ಸಾಹಿತಿ ಡಾ.ಹಂ.ಪ.ನಾಗರಾಜಯ್ಯ, ವಿಶ್ರಾಂತ ಕುಲಪತಿ ಡಾ.ಚಿದಾನಂದ ಗೌಡ, ಕುವೆಂಪು ಪುತ್ರಿ ತಾರಿಣಿ ಚಿದಾನಂದಗೌಡ, ಜನಪ್ರಕಾಶನದ ಜಿ.ರಾಜಶೇಖರಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸರ್ಕಾರ ಬಂದ ಮೇಲೆ ಸಂವಿಧಾನವನ್ನು ಪ್ರತಿ ಸರ್ಕಾರಿ ಶಾಲೆಯಲ್ಲಿ ಓದಿಸುವಂತಹ ಕೆಲಸ ನಡೆಯುತ್ತಿದೆ. ಯಾವುದೇ ಸರ್ಕಾರವಾದರೂ ಸಂವಿಧಾನದ ಪರ ಕಾನೂನುಗಳನ್ನು ರಚಿಸಬೇಕು. ಪ್ರತಿಯೊಬ್ಬರೂ ತಮ್ಮ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ಅರಿವು ಹೊಂದಿರಬೇಕು. ಜತೆಗೆ ವಿದ್ಯಾರ್ಥಿಗಳ ಭವಿಷ್ಯದ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದ್ವಿಭಾಷಾ ಸೂತ್ರವನ್ನು ಅನುಸರಿಸುವ ಪ್ರಯತ್ನ ಸರ್ಕಾರ ಮಾಡುತ್ತದೆ. > ಸಿದ್ದರಾಮಯ್ಯ, ಮುಖ್ಯಮಂತ್ರಿ

ಜಾತಿ ವ್ಯವಸ್ಥೆಗೆ ಸಿಎಂ ಉದಾಹರಣೆ

ದೇಶದಲ್ಲಿರುವ ಜಾತಿ ವ್ಯವಸ್ಥೆಯ ಬಗ್ಗೆ ಉದಾಹರಣೆಯೊಂದಿಗೆ ವಿವರಿಸಿದ ಮುಖ್ಯಮಂತ್ರಿಗಳು, ತನ್ನ ಬಾಲ್ಯದಲ್ಲಿ ತಂದೆಯವರು ಹಸುಗಳಿಗೆ ನೀರು ಕೊಡುವ ಜವಾಬ್ದಾರಿಯನ್ನು ತನಗೆ ವಹಿಸಿದಾಗ, ದಿನಾಲು ನೀರುತರಲು ಬಾವಿ ಹತ್ತಿರ ಹೊಗುತ್ತಿದ್ದೆ. ಬಾವಿಯ ನೀರಿನ ಮೇಲ್ಭಾಗದಲ್ಲಿ ತುಂಬಾ ಕಸಕಡ್ಡಿಗಳು ತುಂಬಿರುವುದರಿಂದ ಬಿಂದಿಗೆಯನ್ನು ನೀರಿನಲ್ಲಿ ಮೇಲೆ&ಕೆಳಗೆ ಮಾಡಿ ನೀರು ಎತ್ತಬೇಕಿತ್ತು. ಮತ್ತೊಮ್ಮೆ ನೀರು ತೆಗೆಯಲು ಹೋದಾಗ ಕಸಗಳು ಮತ್ತೆ ಒಗ್ಗೂಡುತ್ತಿದ್ದವು ಎಂದು ಹೇಳಿ ಸಭೆಯಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net