ಬುಕ್ ಆ್ ರೆಕಾರ್ಡ್ಸ್ ಸೇರಿದ ರಕ್ತದಾನ ಶಿಬಿರ

FotoJet (2)
Published on

ದಾಖಲೆ 3,246 ಯೂನಿಟ್ ಸಂಗ್ರಹ ಸಚಿವ ಡಾ.ಎಂ.ಸಿ. ಸುಧಾಕರ್ ನೇತೃತ್ವದಲ್ಲಿ ಆಯೋಜನೆ

ಚಿಕ್ಕಬಳ್ಳಾಪುರ: ಚಿಂತಾಮಣಿಯಲ್ಲಿ ಮಾಜಿ ಗೃಹ ಸಚಿವ ಎ.ಚೌಡರೆಡ್ಡಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವು ಒಂದೇ ದಿನದಲ್ಲಿ ಅತಿಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಿದ ದಾಖಲೆ ಬರೆದಿದೆ.

ಈ ವಿಶಿಷ್ಟ ಸಾಧನೆಯು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿ, ಮೆಚ್ಚುಗೆಗೆ ಪಾತ್ರವಾಗಿದೆ. ಶಿಬಿರದಲ್ಲಿ 12 ಗಂಟೆ ಅವಧಿಯಲ್ಲಿ ಬರೋಬ್ಬರಿ 3,246 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ. ಈ ಹಿಂದೆ ಒಂದೇ ದಿನ 2,500 ಸಾವಿರ ಯೂನಿಟ್ ರಕ್ತ ಸಂಗ್ರಹಿಸಲಾಗಿತ್ತು.

ಮಾಜಿ ಗೃಹ ಸಚಿವ ಎ.ಚೌಡರೆಡ್ಡಿ ಜನ್ಮದಿನದ ಅಂಗವಾಗಿ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 7 ಸಾವಿರ ಜನರು ಹೆಸರು ನೋಂದಾಯಿಸಿಕೊಂಡಿದ್ದರು. ನಾನಾ ಕಾರಣಗಳಿಂದಾಗಿ ಹಲವರಿಗೆ ರಕ್ತದಾನ ಸಾಧ್ಯವಾಗಲಿಲ್ಲ.

ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 1 ಸಾವಿರ ಯೂನಿಟ್ ರಕ್ತಕ್ಕೆ ಬೇಡಿಕೆ ಇದೆ. ಆದರೆ, ಕೇವಲ 700 ಯೂನಿಟ್ ಸಂಗ್ರಹವಾಗುತ್ತಿದೆ. ರಕ್ತದಾನ ಮಹತ್ವ, ಅಗತ್ಯತೆ ಅರಿವಿನ ಹಿನ್ನೆಲೆಯಲ್ಲಿ ಬೃಹತ್ ಶಿಬಿರ ಆಯೋಜಿಸಲು ನಿರ್ಧರಿಸಲಾಯಿತು. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಸಚಿವ ಡಾ.ಎಂ.ಸಿ. ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಾಖಲೆ ಪ್ರೇರಣೆದಾಯಕ

ರಕ್ತದಾನದಂತಹ ಮಹಾತ್ಕಾರ್ಯದಲ್ಲಿ ಜಿಲ್ಲೆಯು ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿರುವುದು ಖುಷಿಯ ವಿಚಾರ. ಇಂತಹ ಕಾರ್ಯಕ್ರಮಗಳ ಆಯೋಜನೆಗೆ ಇದು ಪ್ರೇರಣೆ ನೀಡಿದೆ. ಮುಂಬರುವ ದಿನಗಳಲ್ಲೂ ಜನರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಮಾದರಿಯಾಗಬೇಕು. ಅದರಲ್ಲೂ ಯುವ ವಿದ್ಯಾರ್ಥಿಗಳು ಉತ್ಸಾಹ ತೋರಬೇಕು. ಇದರಿಂದ ರಕ್ತದ ಕೊರತೆಯಿಂದ ರೋಗಿಗಳು ಜೀವ ಕಳೆದುಕೊಳ್ಳುವಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಛೇರ್ಮನ್ ಎಂ.ಜಯರಾಮ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net