ಛಾಪಾ ಕಾಗದ ಹಗರಣದಲ್ಲಿ ಕಾಂಗ್ರೆಸ್‌ ಅಕ್ರಮಗಳ ಪುಸ್ತಕ ಶೀಘ್ರ-ಜಯಂತ್‌ ತೀನೈಕರ್‌

Jayant-tinekar
Published on

ಕಾರವಾರ: ಕಾಂಗ್ರೆಸ್ ಸರ್ಕಾರದ ಅಕ್ರಮಗಳ ದಾಖಲೆ ಇರುವ ಪುಸ್ತಕವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವುದಾಗಿ ಸಾಮಾಜಿಕ ಹೋರಾಟಗಾರ ಜಯಂತ ತೀನೈಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಛಾಪಾ ಕಾಗದ ಹಗರಣದ ಮೂಲ ದೂರುದಾರ ನಾನಾಗಿದ್ದೆ. ಕರೀಂ ಲಾಲ್ ತೆಲಗಿ ವಿರುದ್ಧ ಹೋರಾಟ ಮಾಡಿದೆ. ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ರಾಜ್ಯದ ಮುಖ್ಯಮಂತ್ರಿಗಳೇ ನನ್ನ ವಿರುದ್ಧ ಮಾನ ಹಾನಿ ಮೊಕದ್ದಮೆ ಹಾಕಿದ್ದರು. ನಾನು ನಿರಂತರವಾಗಿ ಕಾನೂನು ಹೋರಾಟ ಮಾಡಿದೆ. ಛಾಪಾ ಕಾಗದ ಹಗರಣ ಕುರಿತಾದ ದ-ಸ್ಟಾಂಪ್ ಪೇಪರ್ ಸ್ಕ್ಯಾಮ್‌ -2001 ಎಂಬ ಆಂಗ್ಲ ಪುಸ್ತಕವನ್ನು ನಾನು ಬರೆದಿದ್ದೇನೆ. ಅದರ ಮರಾಠಿ ಹಾಗೂ ಕನ್ನಡ ಅನುವಾದ ಪುಸ್ತಕ ಸಿದ್ಧವಾಗಿದ್ದು, ಇನ್ನೆರಡು ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. 2001 ರಿಂದ 2017 ರವರೆಗೆ ನಾನು ಮಾಡಿದ ಹೋರಾಟದ ವಿವರ ಪುಸ್ತಕದಲ್ಲಿದೆ.
ಅದರ ಹೊರತಾಗಿ ನಾನು ಇಷ್ಟೆಲ್ಲ ಹೋರಾಟ ಮಾಡುವಾಗ ಸಾವಿರಾರು ಕೋಟಿಯ ಛಾಪಾ ಕಾಗದ ಹಗರಣವನ್ನು ಕೇವಲ ತೆಲಗಿ ಮಾಡಿಲ್ಲ. ಅದರ ಹಿಂದೆ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಮಾತ್ರವಲ್ಲ ದೆಹಲಿಯಲ್ಲಿ ಕುಳಿತು ತೆಲಗಿಯನ್ನು ಆಡಿಸುವ ಸೂತ್ರದಾರರೂ ಇದ್ದಾರೆ ಎಂಬ ಅಂಶಗಳು ಅರಿವಿಗೆ ಬಂದಿತು. ಅವೆಲ್ಲವುಗಳ ದಾಖಲೆ ನನ್ನ ಬಳಿ ಇದೆ. ಇನ್ನಷ್ಟು ದಾಖಲೆ ಕಲೆ ಹಾಕುತ್ತಿದ್ದು, ದಾಖಲೆ ಸಮೇತ, ಹೆಸರುಗಳ ಸಮೇತ ಪುಸ್ತಕ ಪ್ರಕಟಿಸಲಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net