

ಬೆಂಗಳೂರು: ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಮೊದಲು ಜಾತಿ ಪದ್ಧತಿ ನಾಶ ಆಗಬೇಕು. ಜಾತಿ ಪದ್ಧತಿ ನಾಶವಾಗಲು ಅಂತರ್ಜಾತಿ ವಿವಾಹವೇ ಔಷಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಮಲಾ ಹಂಪನಾ ಸಾಹಿತ್ಯ ವೇದಿಕೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ "ಬೆಳಕು ಬಿತ್ತಿದವರು', "ಪ್ರಾಕೃತ ಕಥಾ ಸಾಹಿತ್ಯ' ಹಾಗೂ "ದಿ ಜರ್ನಿ ಆಫ್ ಲೈಫ್' ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ನಾವು ಯಾವ ಜಾತಿಯಲ್ಲಿ ಹುಟ್ಟಿದ್ದೇವೆ ಎಂಬುದು ಮುಖ್ಯವಲ್ಲ. ಅಂತಿಮವಾಗಿ ನಾವೆಲ್ಲ ಮನುಷ್ಯರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಮಾಜದಲ್ಲಿ ಸಹಭಾಳ್ವೆಯಿಂದ ಇರುವುದೇ ನಿಜವಾದ ಧರ್ಮ, ದ್ವೇಷಿಸುವುದು ಅಧರ್ಮ. ದ್ವೇಷವನ್ನು ಆರಾಧಿಸುವ ಅಪಾಯಕಾರಿ ಬೆಳವಣಿಗೆಗಳು ಸಮಾಜದಲ್ಲಿ ನಡೆಯುತ್ತಿವೆ. ಪ್ರಜ್ಞಾವಂತ ನಾಗರೀಕರು ಇದಕ್ಕೆ ಅವಕಾಶ ಮಾಡಿಕೊಡಬಾರದು. ಪ್ರತಿಯೊಬ್ಬರೂ ಶಿಕ್ಷಣದ ಜತೆಗೆ ವೈಚಾರಿಕತೆ ಹಾಗೂ ವೈಜ್ಞಾನಿಕತೆ ಬೆಳೆಸಿಕೊಂಡಾಗ ಸಮಾಜದಲ್ಲಿ ಬದಲಾವಣೆ ನಿರೀಸಬಹುದು ಎಂದರು.
ಸಾಮಾಜಿಕ ವ್ಯವಸ್ಥೆಗೆ ಚಲನೆ ಸಿಕ್ಕಿದಾಗ ವ್ಯವಸ್ಥೆಯ ಬದಲಾಗುತ್ತಾ ಸಾಗುತ್ತದೆ. ಸ್ವಾತಂತ್ರ್ಯದ ಉದ್ದೇಶ ಈಡೇರಬೇಕಾದರೆ ಅವಕಾಶ ಮತ್ತು ಸಂಪತ್ತು ಸಮಾನವಾಗಿ ಹಂಚಿಕೆ ಆಗಬೇಕು. ಆಗ ಸಮಾಜದಲ್ಲಿ ಸಮಾನತೆ ಕಾಣಬಹುದು. ಈ ಸಂದರ್ಭದಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಕೃತಿ ರಚನೆಗೆ ಪರಂಪರೆಯ ಪ್ರಜ್ಞೆ ಮತ್ತು ಸಮಕಾಲೀನ ಪ್ರಜ್ಞೆ ಮುಖ್ಯ. ಪರಂಪರೆಯ ಒಳಗಡೆ ಸ್ಥಗಿತಗೊಳ್ಳುವ ಅಂಶಗಳು ಸಂಪ್ರದಾಯ, ಚಲನಶೀಲತೆಯುಳ್ಳ ಅಂಶಗಳು ಪರಂಪರೆ. ಪರಂಪರೆಯ ಪ್ರಜ್ಞೆ ಚಲನಶೀಲವಾಗಿದ್ದು, ಗತಕಾಲದ ಸಂಗತಿಗಳನ್ನು ವರ್ತಮಾನದೊಂದಿಗೆ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಕೃತ ಭಾಷೆ ಸಂಸತಕ್ಕಿಂತಲೂ ಹಳೆಯ ಭಾಷೆ. ಭಾಷಾವಾರು ರಾಜಕೀಯದಿಂದಾಗಿ ಪಾಕೃತ ಭಾಷೆಗೆ ಹಿನ್ನಡೆಯಾಯಿತು. ಕನ್ನಡ ಭಾಷೆ ವಿಸ್ತಾರಗೊಳ್ಳಲು ಪ್ರಾಕೃತದ ಕೊಡುಗೆ ಬಹಳಷ್ಟಿದೆ ಎಂದು ಹಿರಿಯ ಲೇಖಕ ಡಾ. ಹಂಪಾ ನಾಗರಾಜಯ್ಯ ಹೇಳಿದರು.
ಹಿರಿಯ ಸಾಹಿತಿ ಕಮಲಾ ಹಂಪನಾ, ಲೇಖಕ ಜಿ.ಎನ್. ಮೋಹನ್, ಲೇಖಕಿ ಪ್ರೊ. ಪ್ರತಿಭಾ ಪಾಶ್ವನಾಥ್ ಮತ್ತಿತರರಿದ್ದರು.